ರಾಜ್ಯದಲ್ಲಿ ಸರ್ಕಾರ ರಚಿಸುವ ಬದಲು ಚುನಾವಣೆಗೆ ಹೋಗುವುದು ಸೂಕ್ತ ಎಂದು ಭಾವಿಸಿದ್ದ ಬಿಜೆಪಿ ಹೈಕಮಾಂಡ್ ಒಲ್ಲದ ಮನಸ್ಸಿನಿಂದಲೇ ಸರ್ಕಾರ ರಚಿಸಲು ಯಡಿಯೂರಪ್ಪನವರಿಗೆ ಒಪ್ಪಿಗೆ ನೀಡಿತ್ತು ಎನ್ನಲಾಗ್ತಿದೆ ಅದಾದ ನಂತರ ಸಚಿವ ಸಂಪುಟ ವಿಸ್ತರಣೆಗೆ ಸಮ್ಮತಿ ನೀಡಲು 25 ದಿನಗಳ ಕಾಲ ತೆಗೆದುಕೊಂಡ ಬಿಜೆಪಿ ವರಿಷ್ಠರು, ಖಾತೆ ಹಂಚಿಕೆಯಲ್ಲೂ ತಮ್ಮ ಪ್ರಾಬಲ್ಯ ಮೆರೆದಿದ್ದರು.
ಇದೀಗ ಯಡಿಯೂರಪ್ಪನವರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ನಡುವಿನ ಶೀತಲ ಸಮರ ತಾರಕಕ್ಕೇರಿದ್ದು, ಯಡಿಯೂರಪ್ಪ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಜಾಗೊಂಡಿದ್ದ ಇಬ್ಬರಿಗೆ ಪ್ರಮುಖ ಸ್ಥಾನ ಕಲ್ಪಿಸಲಾಗಿದೆ. ಇದರ ಜೊತೆಗೆ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಪಕ್ಷದ ತೀರ್ಮಾನವೇ ಅಂತಿಮ ಎಂದು ಹೇಳುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪನವರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.