ತಿರುವನಂತಪುರಂ ( ಕೇರಳ) : ಕೇರಳ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ ಅಶ್ರಫ್ ಕನ್ನಡ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಗಮನಸೆಳೆದರು.
ಸೋಮವಾರ ಕೇರಳ ವಿಧಾನಸಭೆಯಲ್ಲಿ ನಡೆದ ಶಾಸಕರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಬಹುತೇಕರು ಮಲಯಾಳಂ ಮತ್ತು ಇನ್ನು ಕೆಲವರು ಇಂಗ್ಲಿಷ್ನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಎ.ಕೆ.ಎಂ ಅಶ್ರಫ್ ಕನ್ನಡ ಭಾಷೆಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಕರ್ನಾಟಕದ ಗಡಿ ಜಿಲ್ಲೆಯಾದ ಕಾಸರಗೋಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಹಲವು ಭಾಷೆಗಳನ್ನ ಮಾತನಾಡುವ ಜಿಲ್ಲೆಯಾದ್ದರಿಂದ ಕಾಸರಗೋಡನ್ನು ಸಪ್ತ ಭಾಷೆಗಳ ನಾಡು ಎಂದು ಕರೆಯಲಾಗುತ್ತದೆ.
ಈ ಪ್ರದೇಶದಿಂದ ಆಯ್ಕೆಯಾದ ಶಾಸಕ ಅಶ್ರಫ್ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಗಡಿನಾಡ ಕನ್ನಡಿಗರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.
ಇತ್ತೀಚೆಗೆ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ ಇಂಡಿಯನ್ ಮುಸ್ಲಿಂ ಲೀಗ್ನಿಂದ ಸ್ಪರ್ಧಿಸಿದ್ದ ಎ.ಕೆ.ಎಂ ಅಶ್ರಫ್ ಭರ್ಜರಿ ಜಯಗಳಿಸಿದ್ದರು.