ಆಸ್ಟ್ರೇಲಿಯಾ ವಿರುದ್ಧದ ಈ ಬಾರಿಯ ಸರಣಿಯನ್ನು ಟೀಮ್ ಇಂಡಿಯಾ ಹಾಗೂ ಅಭಿಮಾನಿಗಳು ಸುದೀರ್ಘ ಕಾಲದವರೆಗೆ ನೆನಪಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಟೀಮ್ ಇಂಡಿಯಾ ಆಟಗಾರರಿಗಂತೂ ಇದು ಜೀವಮಾನದುದ್ದಕ್ಕೂ ಸಿಹಿ ನೆನಪಾಗಿ ಉಳಿದುಕೊಳ್ಳಲಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಪರವಾಗಿ ಮೂರು ಮಾದರಿಲ್ಲೂ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದ ಟಿ ನಟರಾಜನ್‌ಗೆ ಇದು ಅತ್ಯಂತ ವಿಶೇಷ ಪ್ರವಾಸವಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳ ಸೋಲಿನ ಮೂಲಕ ಆಸಿಸ್ ಪ್ರವಾಸವನ್ನು ಆರಂಭಿಸಿದ್ದ ಟೀಮ್ ಇಂಡಿಯಾ ಅಂತಿಮ ಪಂದ್ಯದಲ್ಲಿ ಗೆದ್ದು ಗೆಲುವಿನ ಲಯವನ್ನು ಆಸಿಸ್ ನೆಲದಲ್ಲಿ ಕಂಡುಕೊಂಡಿತ್ತು. ಬಳಿಕ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಪಂದ್ಯದ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಭಾರತ ಚುಟುಕು ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿತು.
ಏಕದಿನ ಸರಣಿಯಲ್ಲಿ ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದ ನಟರಾಜನ್ ಟಿ20 ಸರಣಿಯ ಎಲ್ಲಾ ಪಂದ್ಯದಲ್ಲೂ ಅವಕಾಶವನ್ನು ಪಡೆದುಕೊಂಡು ಮಿಂಚಿದರು. ಸರಣಿ ಗೆಲುವಿನ ಸಂಭ್ರಮದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ಟ್ರೋಫಿಯನ್ನು ಟಿ ನಟರಾಜನ್ ಅವರಿಗೆ ಹಸ್ತಾಂತರಿಸಿದ್ದರು. ಇದು ತನ್ನ ಕಣ್ಣಲ್ಲಿ ಗೊತ್ತಿಲ್ಲದೆ ನೀರು ತರಿಸಿತ್ತು ಎಂದು ನಟರಾಜನ್ ಹೇಳಿದ್ದಾರೆ.
“ನಾನು ಅದನ್ನು ನಿರೀಕ್ಷಿಸಿರಲಿಲ್ಲ. ನಾನು ಅಲ್ಲಿ ನಿಂತಿದ್ದೆ, ನನ್ನ ಬಳಿಗೆ ಬಂದ ನಾಯಕ ವಿರಾಟ್ ಕೊಹ್ಲಿ ನನಗೆ ಟ್ರೋಫಿಯನ್ನು ಹಸ್ತಾಂತರಿಸಿದ್ದರು. ನನ್ನ ಕಣ್ಣು ತುಂಬಿ ಬಂದಿತ್ತು. ವಿರಾಟ್ ಕೊಹ್ಲಿಯಂತಾ ದಿಗ್ಗಜ ಆಟಗಾರ ನಿಮ್ಮ ಬಳಿ ಬಂದು ಟ್ರೋಫಿಯನ್ನು ಹಸ್ತಾರಿಸುತ್ತಾನೆ ಎಂದರೆ ಅದೊಂದು ಶ್ರೇಷ್ಠವಾದ ಅನುಭವ. ಅದನ್ನು ನನ್ನಿಂದ ವಿವರಿಸಲು ಅಸಾಧ್ಯ” ಎಂದು ನಟರಾಜನ್ ಹೇಳಿದರು.
ಆಸ್ಟ್ರೇಲಿಯಾ ವಿರುದ್ಧದ ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆದ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟಿ ನಟರಾಜನ್ ಟೆಸ್ಟ್ ಪಂದ್ಯಕ್ಕೂ ಪದಾರ್ಪಣೆಯನ್ನು ಮಾಡಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಈ ಮೂಲಕ ನಟರಾಜನ್ ಒಂದೇ ಸರಣಿಯಲ್ಲಿ ಕ್ರಿಕೆಟ್‌ನ ಮೂರು ಮಾದರಿಯಲ್ಲೂ ಪದಾರ್ಪಣೆ ಮಾಡಿದ ಟೀಮ್ ಇಂಡಿಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರದರು.