ಮನಸ್ಸಿದ್ದರೆ ಮಾರ್ಗ.. ಸಾಧಿಸುವ ಛಲವಿದ್ದರೆ ಯಶಸ್ಸು ಕಟ್ಟಿಟ್ಟಬುತ್ತಿ. ನಿಧಾನಕ್ಕಾದರೂ ಪಟ್ಟ ಶ್ರಮಕ್ಕೆ ಫಲ ಸಿಗುತ್ತೆ. ಈ ಬಾರಿಯ ಐಪಿಎಲ್ ನಲ್ಲಿ ಕೋಟಿ ಕೋಟಿ ಬೆಲೆಗೆ ಬಿಕರಿಯಾದ ಇಬ್ಬರು ಯುವ ಆಟಗಾರರು ಸಾಧನೆಗೆ ಬಡತನ, ಕಷ್ಟ ಅಡ್ಡಿಯಾಗಲಾರದು ಎಂದು ಸಾಬೀತು ಪಡಿಸಿದ್ದಾರೆ.
ಯೆಸ್, ಪ್ರತಿಷ್ಠಿತ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ೨೦೨೦ ಹರಾಜು ಪ್ರಕ್ರಿಯೆಯಲ್ಲಿ ಯುವ ಆಟಗಾರರು ಕೋಟಿ ಕೋಟಿಗೆ ಸೇಲಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಪಾನಿಪುರಿ ಮಾರುವವರ ಮತ್ತು ಚಾಲಕನ ಮಕ್ಕಳು ಕೋಟಿ ಕೋಟಿಗೆ ಬಿಕರಿಯಾಗಿದ್ದಾರೆ.
೧೭ ವರ್ಷದ ಯಶಸ್ವಿ ಜೈಸ್ವಾಲ್ ಅವರನ್ನು ೨.೪೦ ಕೋಟಿ ರೂ ನೀಡಿ ರಾಜಸ್ಥಾನ ರಾಯಲ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಮುಂಬೈನ ಈ ಯುವ ಆಟಗಾರ ಜೀವನೋಪಾಯಕ್ಕಾಗಿ ಪಾನಿಪುರಿ ಮಾರುತ್ತಿದ್ದವರು. ತಂದೆ ಪಾನಿಪುರಿ ಮಾರಿ ಮಗನ ಕ್ರಿಕೆಟ್ ಕನಸಿಗೆ ನೀರೆರೆದಿದ್ದಾರೆ. ಇವರು ತಳ್ಳುಗಾಡಿಗಳಲ್ಲಿ ತಿಂಡಿ ಪೊಟ್ಟಣ ಮಾರಿ, ಪಾನೀಪುರಿ ಮಾರಿ ಜೀವನ ಕ್ರಿಕೆಟ್ ಅಭ್ಯಾಸ ಮಾಡಿದವರು. ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ದೇಶಿಯ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಅವರು ಶಿಲ್ಪ ಶೆಟ್ಟಿ ಒಡೆತನದ ರಾಯಲ್ಸ್ ಪಾಲಾಗುವ ಮೂಲಕ ರಸ್ತೆಬದಿ ಪಾನಿಪುರಿ ಮಾರಿ ಬೆಳೆಸಿದ ತಂದೆಯ ಶ್ರಮಕ್ಕೆ ಫಲ ಸಿಕ್ಕಂತಾಗಿದೆ.
ಅಂತೆಯೇ ಭಾರತ ಅಂಡರ್ -೧೯ ತಂಡ ನಾಯಕ ಪ್ರಿಯಮ್ ಗಾರ್ಗ್ ಅವರನ್ನು ೧.೯ ಕೋಟಿ ರೂಗಳಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿದೆ. ಈ ಯುವ ಆಟಗಾರ ಉತ್ತರ ಪ್ರದೇಶದವರಾಗಿದ್ದು, ತಂದೆ ಪರೀಕ್ಷಿತ್ ನಗರದಲ್ಲಿ ಶಾಲಾ ವಾಹನದ ಚಾಲಕರಾಗಿ ದುಡಿಯುತ್ತಿದ್ದಾರೆ. ಕಷ್ಟದ ನಡುವೆಯೂ ಮಗನಿಗೆ ಪ್ರೋತ್ಸಾಹ ನೀಡಿದ್ದಾರೆ. ಹಠ ಬಿಡದೆ ಕ್ರಿಕೆಟ್ ಅಂಗಳದಲ್ಲಿ ಮಿಂಚಿ, ಅಂಡರ್ – ೧೯ ತಂಡದ ನಾಯಕರಾಗಿರುವ ಪ್ರಿಯಂ ಐಪಿಎಲ್ ಕಡೆಗೆ ಚಿತ್ತಹರಿಸಿದ್ದಾರೆ.