ಬಹು ನಿರೀಕ್ಷಿತ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಿದ್ದು, ನಿರೀಕ್ಷೆಗೂ ಮೀರಿ ಭಾರಿ ಯಶಸ್ಸುಗಳಿಸಿದ್ದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕುರುಕ್ಷೇತ್ರ ರಿಲೀಸ್ ಆಗುತ್ತಿದ್ದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನ್ಯಾಷನಲ್ ಸ್ಟಾರ್ ಆಗಿ ಬಿಟ್ಟಿದ್ದಾರೆ. ದರ್ಶನ್ ಅವರ ದುರ್ಯೋಧನನ ಅಬ್ಬರಕ್ಕೆ ಇಡೀ ಭಾರತೀಯ ಚಿತ್ರರಂಗವೇ ಮೆಚ್ಚಿದೆ. ಬಾಕ್ಸ್ಆಫೀಸಲ್ಲೂ ಕುರುಕ್ಷೇತ್ರ ಕಾರುಬಾರು ಜೋರಾಗಿದೆ..! ಈ ನಡುವೆ ದರ್ಶನ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗನ ಸಿನಿಮಾದ ಕೆಲಸದಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡಿದ್ದಾರೆ.
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವಾಗ್ಲೂ ಹೊಸಬರ ಚಿತ್ರಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸಪೋರ್ಟ್ ಮಾಡ್ತಾನೇ ಇರ್ತಾರೆ. ಸಿನಿಮಾ ಮುಹೂರ್ತವಿರಲಿ, ಟ್ರೇಲರ್ ಲಾಂಚ್ ಇರಲಿ.. ಆಡಿಯೋ ಬಿಡುಗಡೆ ಇರಲಿ ಅಥವಾ ಕ್ಲಾಪ್ ಮಾಡಿ ಶುಭ ಹಾರೈಸುವುದೇ ಇರಲಿ ದರ್ಶನ್ ಯಾರು ಕರೆದರೂ ಇಲ್ಲ ಎಂದು ಹೇಳಲ್ಲ. ದರ್ಶನ್ ಸ್ಯಾಂಡಲ್‌ವುಡ್‌ನ ಲಕ್ಕಿ ಹ್ಯಾಂಡೇ. ದರ್ಶನ್ ಸಿನಿಮಾಕ್ಕೆ ಸಾಥ್ ಕೊಟ್ರು ಅಂದ್ರೆ ಸಿನಿಮಾ ಗೆದ್ದಂತೆಯೇ ಎನ್ನುವ ನಂಬಿಕೆ ಇದೆ.
ದರ್ಶನ್ ತಾವು ಎಷ್ಟೇ ಬ್ಯುಸಿ ಇದ್ದರೂ ಪ್ರೀತಿಯಿಂದ ಕರೆದಲ್ಲಿಗೆ ಹೋಗದೇ ಇರಲಾರರು. ಇತ್ತೀಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ದಶರಥ’ ಸಿನಿಮಾಕ್ಕೆ ಧ್ವನಿ ನೀಡಿದ್ದ ದರ್ಶನ್ ಈಗ ಕ್ರೇಜಿಸ್ಟಾರ್ ಅವರ ಪುತ್ರ ಮನೋರಂಜನ್ ಅವರ ಸಿನಿಮಾಗೂ ಕೈ ಜೋಡಿಸಿದ್ದಾರೆ. ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅವರ ‘ಪ್ರಾರಂಭ’ ಸಿನಿಮಾ ಬಗ್ಗೆ ನೀವು ಕೇಳಿರಬಹುದು. ಅನೇಕ ದಿನಗಳ ಹಿಂದೆಯೇ ಪ್ರಾರಂಭ ಸಿನಿಮಾ ಸೆಟ್ಟೇರಿತ್ತು. ಈಗ ಪ್ರಾರಂಭದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಚಿತ್ರತಂಡ ಡಬ್ಬಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಈ ಸಿನಿಮಾದ ಟೀಸರ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಾಯ್ಸ್ ಡಬ್ಬಿಂಗ್ ಮಾಡ್ತಿದ್ದಾರೆ. ಈ ಮೂಲಕ ರವಿಮಾಮನ ಮಗನ ಸಿನಿಮಾಕ್ಕೆ ಡಿ.ಬಾಸ್ ಕೈ ಜೋಡಿಸಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ಕೀರ್ತಿ ಕಲಕೇರಿ, ಕಡ್ಡಿಪುಡಿ ಚಂದ್ರು, ಹನುಮಂತೇಗೌಡ, ಸೂರಜ್ ಮತ್ತಿತರರು ನಟಿಸಿದ್ದಾರೆ. ಈ ತಿಂಗಳ 23ನೇ ತಾರೀಖು ಟೀಸರ್ ರಿಲೀಸ್ ಆಗುತ್ತಿದೆ.