ಗಣೇಶ ವಿಸರ್ಜನೆ ವೇಳೆ ಹಿಂಸಾಚಾರ: ನಾಗಮಂಗಲಕ್ಕೆ ಹೆಚ್ ಡಿ.ಕುಮಾರಸ್ವಾಮಿ ಭೇಟಿ
ಮಂಡ್ಯ ಜಿಲ್ಲೆಯ ನಾಗಮಂಗಲ ಸಹಜಸ್ಥಿತಿಗೆ ಬಂದಿದ್ರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸದ್ಯ 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನಾಗಮಂಗಲ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಇದರ ಬೆನ್ನಲ್ಲೇ ಕೋಮುಗಲಭೆ ನಡೆದ ಸ್ಥಳಕ್ಕೆ ಇಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾರೆ. ಬೆಂಕಿ ಬಿದಿದ್ದ ಬೈಕ್ ಶೋರೂಂ, ಅಂಗಡಿಗಳಿಗೆ ಹೆಚ್ಡಿ ಕುಮಾರಸ್ವಾಮಿ ಅವರು ಭೇಟಿ, ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಅಧಿಕಾರಿಗಳು ಮತ್ತು ಅಂಗಡಿ ಮಾಲೀಕರಿಂದ ಮಾಹಿತಿ ಪಡೆದರು.
ಭೇಟಿ ವೇಳೆ ಗಲಭೆಯಿಂದ ಹಾನಿಗೊಳಗಾದ ಅಂಗಡಿಗಳ ಮಾಲೀಕರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಅವರ ಅಳಲು ಆಲಿಸಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿಯವರಿಗೆ ಮಾಜಿ ಶಾಸಕರಾದ ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ ಸಾಥ್ ನೀಡಿದರು.
ಇನ್ನೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರಿಂದ ಸ್ಥಳ ಪರಿಶೀಲನೆ ಮಾಡಲಾಗಿದೆ. ಪೊಲೀಸರ ಜೊತೆ ಸುಟ್ಟುಹೋದ ಅಂಗಡಿ ಮುಂಗಟ್ಟುಗಳನ್ನು ತಜ್ಞರು ಪರಿಶೀಲಿಸಿದ್ದು, ತನಿಖೆಗೆ ಅಗತ್ಯವಿರುವ ವಸ್ತುಗಳನ್ನು ಸಂಗ್ರಹಿಸಿಕೊಂಡಿದ್ದಾರೆ. FSL ತಜ್ಞರು ಸ್ಥಳದಲ್ಲಿ ಇಂಚಿಂಚೂ ಮಾಹಿತಿ ಸಂಗ್ರಹಿಸಿದ್ದಾರೆ.