ಗಾಂಧೀಜಿ ಹೆಸರು ಬದಲು ಬಗ್ಗೆ ಬಿಜೆಪಿ ರಾಜ್ಯ ನಾಯಕರ ಪ್ರತಿಕ್ರಿಯೆ ಯಾಕಿಲ್ಲ?: ಡಿ.ಕೆ. ಶಿವಕುಮಾರ್
ಬೆಂಗಳೂರು:“ಬಿಜೆಪಿ ನಾಯಕರು ಗಾಂಧೀಜಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ತಮ್ಮ ಕಚೇರಿಗಳಲ್ಲಿ ಗಾಂಧೀಜಿ ಅವರ ಫೋಟೋ ಇಟ್ಟುಕೊಳ್ಳುವ ಯೋಗ್ಯತೆ ಕೂಡ ಅವರು ಉಳಿಸಿಕೊಂಡಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹರಿಹಾಯ್ದರು. ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜತೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಶನಿವಾರ ಮಾತನಾಡಿದರು.
“ಬಿಜೆಪಿ ನಾಯಕರು ಇನ್ನು ಮುಂದೆ ಮಹಾತ್ಮಾ ಗಾಂಧಿ ಅವರ ಪ್ರತಿಮೆ ಮುಂದೆ ಕೂತು ಹೋರಾಟ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಮಹಾತ್ಮಾ ಗಾಂಧಿ ಅವರ ಫೋಟೋಗಳನ್ನು ತಮ್ಮ ಕಚೇರಿಗಳಲ್ಲಿ ಹಾಕಿಕೊಳ್ಳುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಅವರ ಫೋಟೋ ಹಾಕಿಕೊಳ್ಳುವ ಯೋಗ್ಯತೆ ನಿಮಗಿಲ್ಲ. ಅವರ ಹೆಸರನ್ನು ಯೋಜನೆಯಿಂದ ತೆಗೆದ ಮೇಲೆ ನಿಮಗೆ ಯಾವ ನೈತಿಕತೆ ಇದೆ? ನೀವು ಮಹಾತ್ಮಾ ಗಾಂಧಿ ಬಗ್ಗೆ ಮಾತನಾಡುವ ಹಾಗೂ ಅವರ ಪ್ರತಿಮೆಗೆ ಹೂವಿನ ಹಾರ ಹಾಕುವ ಹಕ್ಕೂ ಇಲ್ಲ. ನಿಮ್ಮ ಬಳಿ ಇರುವ ಮಹಾತ್ಮಾ ಗಾಂಧೀಜಿ ಅವರ ಫೋಟೋಗಳನ್ನು ನಮಗೆ ಕೊಟ್ಟುಬಿಡಿ, ನಾವು ಅವುಗಳನ್ನು ನಮ್ಮ ಹಾಗೂ ಗಾಂಧಿಜಿಯನ್ನು ಗೌರವಿಸುವ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ” ಎಂದರು.
“ಮಹಾತ್ಮಾ ಗಾಂಧೀಜಿ ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ನೇತೃತ್ವ ವಹಿಸಿ ನೂರು ವರ್ಷಗಳು ತುಂಬಿವೆ. ಇಂತಹ ಸಂಭ್ರಮಾಚರಣೆ ವೇಳೆ ಅವರ ಹೆಸರನ್ನು ತೆಗೆದು, ಮತ್ತೊಮ್ಮೆ ಅವರ ಕೊಲೆ ಮಾಡುತ್ತಿದ್ದೀರಲ್ಲಾ, ಈ ದೇಶದಲ್ಲಿ ಇದಕ್ಕಿಂತ ದೊಡ್ಡ ಅಪಮಾನ ಬೇರೋಂದಿಲ್ಲ” ಎಂದು ಹೇಳಿದರು.






