ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಕುಮಾರಣ್ಣ ಪ್ರೀತಿಸುವ ದೊಡ್ಡ ವರ್ಗ ಕ್ಷೇತ್ರದಲ್ಲಿದ್ದಾರೆ: ನಿಖಿಲ್ ಕುಮಾರಸ್ವಾಮಿ
ಹಾಸನ : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಕುಮಾರಣ್ಣನ ಅಭಿಮಾನಿಗಳು ಇರುವ ಕ್ಷೇತ್ರ. ನಮ್ಮನ್ನು ಪ್ರೀತಿಸುವ ದೊಡ್ಡ ವರ್ಗ ಆ ಕ್ಷೇತ್ರದಲ್ಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಹಾಸನ ಜಿಲ್ಲೆಯ ಅರಕಲಗೂಡು ಕೆಲಗಳಲೆ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಶಾಸಕ ಜಿ.ಟಿ.ದೇವೇಗೌಡರ ಬಗ್ಗೆ ಕುಮಾರಣ್ಣ ಹೇಳಿಕೆ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದ ಸಾ.ರಾ.ಮಹೇಶ್ ಸ್ಪರ್ಧೆ ವಿಚಾರಕ್ಕೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಇವತ್ತಿನ ಕಾಲಘಟ್ಟದಲ್ಲಿ ಇವೆಲ್ಲವನ್ನೂ ಚರ್ಚೆ ಮಾಡುವುದು ಅಪ್ರಸ್ತುತ. ಏನೇ ಬಗೆ ಹರಿಯಬೇಕಾದರೂ ಕಾಲ ಬರಬೇಕು, ಕಾಲ ನಿರ್ಣಯ ಮಾಡುತ್ತೆ. ಸ್ವಾಭಾವಿಕವಾಗಿ ಸಾರ್ವಜನಿಕ ವಲಯದಲ್ಲಿ ನಿಂತು ಚುನಾಯಿತ ಪ್ರತಿನಿಧಿಗಳು ಚರ್ಚೆ ಮಾಡಿದ ಸಂದರ್ಭದಲ್ಲಿ ಕಾರ್ಯಕರ್ತರಲ್ಲಿ ಸ್ವಲ್ಪ ಇರುಸು ಮುರುಸು ಆಗಿರುವುದು ಸತ್ಯ. ಇದನ್ನ ಮಾಧ್ಯಮದ ಮುಂದೆ ಮಾತನಾಡಿ ಇತ್ಯರ್ಥ ಆಗುವುದು ಏನು ಅಲ್ಲ ಎಂದು ಹೇಳಿದರು.
ವರಿಷ್ಠರು ಕಾರ್ಯಕರ್ತರ ಗೌರವವನ್ನು ಕಾಪಾಡಿಕೊಳ್ಳುವ ದೃಷ್ಟಿಯಲ್ಲಿ, ಕ್ಷೇತ್ರವನ್ನು ಉಳಿಸಿಕೊಳ್ಳಲು ಆಯಾ ಸಂದರ್ಭದಲ್ಲಿ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆಂದು ಪಕ್ಷದ ಕಾರ್ಯಕರ್ತನಾಗಿ ನಂಬಿಕೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
ಇನ್ನೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಬಗ್ಗೆ ಪ್ರೀತಂಗೌಡ ವಿರೋಧ ವಿಚಾರಕ್ಕೆ ಮಾತನಾಡಿದ ಅವರು, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಶಿಸ್ತು ಪಾಲನೆ ಕಮಿಟಿ ಇರುತ್ತೆ, ಆ ಶಿಸ್ತು ಪಾಲನೆ ಕಮಿಟಿ ಯಾರ್ಯಾರು ಪಕ್ಷದ ಅಶಿಸ್ತಿನ ನಡವಳಿಕೆಗೆ ಕಾರಣರಾಗುತ್ತಾರೆ. ಆಯಾ ಪಕ್ಷದ ಕಮಿಟಿಯಲ್ಲಿ ಇವೆಲ್ಲವೂ ತೀರ್ಮಾನ ಮಾಡುತ್ತಾರೆ ಎಂದು ಪ್ರೀತಂಗೌಡಗೆ ಟಾಂಗ್ ನೀಡಿದರು.






