ಜೀರೋ ಟ್ರಾಫಿಕ್ ಗಾಗಿ ಡಿಸಿಎಂ ಡಾ.ಜಿ. ಪರಮೇಶ್ವರ್ ಶಾಲಾ ಮಕ್ಕಳು, ಪೋಷಕರ ಕ್ಷಮೆ ಯಾಚಿಸಿದ್ದಾರೆ.
ಗೃಹ ಸಚಿವರಾದ ಸಂದರ್ಭದಲ್ಲಿಯೂ ಜೀರೋ ಟ್ರಾಫಿಕ್ ಮೂಲಕ ಸಂಚರಿಸುತ್ತಿದ್ದ ಕಾರಣ ಪರಮೇಶ್ವರ್ ಅವರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಸಮಯದ ಕಾರಣ ಮತ್ತು ಅವಕಾಶ ಇರುವ ಕಾರಣ ಜೀರೋ ಟ್ರಾಫಿಕ್ ಬಳಸಿಕೊಳ್ಳುವ ಬಗ್ಗೆ ಅವರು ಸಮರ್ಥಿಸಿಕೊಂಡಿದ್ದರು.
ಇಂದು ಡಿಸಿಎಂ ಜೀರೋ ಟ್ರಾಫಿಕ್ ನಿಂದಾಗಿ ಶಾಲಾ ಮಕ್ಕಳಿಗೆ ತೊಂದರೆಯಾಗಿದ್ದು, ಅವರು ಕ್ಷಮೆಯಾಚಿಸಿದ್ದಾರೆ. ಬೆಂಗಳೂರಿನಲ್ಲಿ ಆರ್.ಟಿ. ನಗರದಲ್ಲಿ ಕಾಮಗಾರಿ ವೀಕ್ಷಣೆಗೆ ಜಿ. ಪರಮೇಶ್ವರ್ ಜೀರೋ ಟ್ರಾಫಿಕ್ ನಲ್ಲಿ ತೆರಳಿದ್ದಾರೆ. ಇದರಿಂದಾಗಿ ಆರ್.ಟಿ. ನಗರದಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ.
ಪರಮೇಶ್ವರ ಆಗಮನದ ಹಿನ್ನೆಲೆಯಲ್ಲಿ ಖಾಸಗಿ ಶಾಲೆ ಬಸ್ ಗಳಿಗೆ ತಡೆ ನೀಡಲಾಗಿತ್ತು.20 ನಿಮಿಷಗಳ ಕಾಲ ರಸ್ತೆಯಲ್ಲೇ ಮಕ್ಕಳು ಬಸ್ ನಲ್ಲಿ ಕುಳಿತುಕೊಳ್ಳುವಂತಾಗಿತ್ತು. ಪರಮೇಶ್ವರ್ ಹಾಗೂ ಅವರ ಬೆಂಬಲಿಗರ ಸಾಲು ಸಾಲು ವಾಹನಗಳು ಬಂದಿದ್ದ ಕಾರಣ, ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ಶಾಲಾ ಮಕ್ಕಳು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಇದು ತಮ್ಮ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪರಮೇಶ್ವರ್ ಶಾಲಾ ಮಕ್ಕಳಿಗೆ ತೊಂದರೆ ಆಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.