ಬೆಂಗಳೂರು: ನಗರ್ತಪೇಟೆಯ ಮೊಬೈಲ್ ಬಿಡಿ ಭಾಗಗಳ ಮಾರಾಟ ಅಂಗಡಿಯೊಂದರಲ್ಲಿ ಭಕ್ತಿಗೀತೆ ಹಾಕಿದ ವಿಚಾರಕ್ಕಾಗಿ ಮಾಲೀಕನ ಮೇಲೆ ಹಲ್ಲೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿರುವ ಕೃಷ್ಣಾ ಟೆಲಿಕಾಂ ಶಾಪ್ ಮಾಲೀಕ ಹಾಗೂ ಹಲ್ಲೆಗೊಳಗಾದ ಮುಖೇಶ್ ವಿರುದ್ಧ ಬಂಧಿತ ಆರೋಪಿ ಸುಲೇಮಾನ್ ತಂದೆ ಜಬೀನ್ ಎಂಬುವರು ನೀಡಿದ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.
ದೂರಿನಲ್ಲಿ ಏನಿದೆ ?
ನ್ಯಾಯಾಲಯ ಸೂಚನೆ ಮೇರೆಗೆ ಮುಕೇಶ್ ವಿರುದ್ಧ ಎಫ್ಐಅರ್ ದಾಖಲಾಗಿದೆ.
ರಂಜಾನ್ ಹಿನ್ನೆಲೆಯಲ್ಲಿ ಸಿದ್ದಣ್ಣ ಗಲ್ಲಿಯಲ್ಲಿರುವ ಜುಮ್ಮಾ ಮಸೀದಿಗೆ ಪುತ್ರ ಸುಲೇಮಾನ್ ಹಾಗೂ ಸಹಚರೊಂದಿಗೆ ಪ್ರಾರ್ಥನೆ ಹೋಗುವಾಗ ಕೃಷ್ಣಾ ಟೆಲಿಕಾಂ ಶಾಪ್ ನಲ್ಲಿ ಕಳೆದ ಮೂರು ದಿನಗಳಿಂದ ಜೋರಾಗಿ ಮ್ಯೂಸಿಕ್ ಸಿಸ್ಟಂ ಹಾಡನ್ನ ಹಾಕಿರುವ ಪ್ರಶ್ನಿಸಿದ್ದಾರೆ. ರಂಜಾನ್ ಹಿನ್ನೆಲೆಯಲ್ಲಿ ಪ್ರತಿದಿನ ಸುಮಾರು 3 ಸಾವಿರ ಮಂದಿ ಪ್ರಾರ್ಥನೆಗಾಗಿ ಈ ರಸ್ತೆಗೆ ಬರುತ್ತಾರೆ.ಇದರಿಂದ ಅವರಿಗೆಲ್ಲ ತೊಂದರೆಯಾಗಲಿದೆ ಎಂದು ಹೇಳಿದಾಗ ಏಕಾಏಕಿ ಮುಕೇಶ್, ಸುಲೇಮಾನ್ ಹಾಗೂ ಸಹಚರರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮುಕೇಶ್ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಅಂದು ಆಗಿದ್ದೇನು ?
ಮಾರ್ಚ್ 17 ರಂದು ಅಂಗಡಿಯಲ್ಲಿ ಜೋರಾಗಿ ಮ್ಯೂಸಿಕ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಕೇಶ್ ಮೇಲೆ ಹಲ್ಲೆ ಮಾಡಿದ ಆರೋಪದಡಿ ಸುಲೇಮಾನ್, ಶಹವಾಜ್, ತರುಣ್, ರೋಹಿತ್ ಸೇರಿ ಹಲವರನ್ನ ಬಂಧಿಸಲಾಗಿತ್ತು. ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಿಜೆಪಿಯ ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಹಾಗೂ ಪಿ.ಸಿ.ಮೋಹನ್ ನೇತೃತ್ವದ ಬಿಜೆಪಿ ನಿಯೋಗ ಸ್ಥಳದಲ್ಲೇ ಜಮಾಯಿಸಿ ಭಾರೀ ಪ್ರತಿಭಟನೆ ಮಾಡಿದ್ದರು. ಈ ವೇಳೆ ನಗರ್ತಪೇಟೆಯಲ್ಲಿ ಅಂಗಡಿ-ಮುಂಗಟ್ಟು ಬಂದ್ ಆಗಿತ್ತು.