ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಯುವರತ್ನ ಚಿತ್ರದ ನಂತರ ಅಪ್ಪು ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, ಬಹುದ್ಧೂರ್, ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಜೇಮ್ಸ್ ಸಿನಿಮಾ ಪ್ರತಿ ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಲೇ ಇದೆ. ಕಳೆದ ಆಗಸ್ಟ್ 15 ರಂದು ಜೇಮ್ಸ್ ಹೊಸ ಪೋಸ್ಟರ್ ಬಂದಿತ್ತು. ಅದಾದ ಮೇಲೆ ಮತ್ತೆ ಯಾವ ಅಪ್‌ಡೇಟ್ ಸಹ ಹೊರಬಿದ್ದಿಲ್ಲ.
ಸೈಲೆಂಟ್ ಆಗಿ ಚಿತ್ರೀಕರಣ ಮಾಡ್ತಿರುವ ಜೇಮ್ಸ್ ಅಡ್ಡಾದಿಂದ ಈಗೊಂದು ಭರ್ಜರಿ ಸುದ್ದಿ ಬಂದಿದೆ. ಶೂಟಿಂಗ್ ಪೂರ್ಣಗೊಳಿಸಿಲ್ಲ. ವಿಡಿಯೋ ಹಾಡು ಬಂದಿಲ್ಲ. ಟ್ರೈಲರ್ ಅಥವಾ ಟೀಸರ್ ಬಿಡುಗಡೆಯಾಗಿಲ್ಲ. ಮೇಕಿಂಗ್ ಹಂತದಲ್ಲೇ ಭಾರಿ ಬೇಡಿಕೆ ಹೊಂದಿರುವ ಜೇಮ್ಸ್ ಸಿನಿಮಾ ಸ್ಯಾಟ್‌ಲೈಟ್ ಹಕ್ಕು ದಾಖಲೆ ಬೆಲೆಗೆ ಮಾರಾಟವಾಗಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡ್ತಿದೆ.
ಸದ್ಯದ ವರದಿ ಪ್ರಕಾರ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದ ಸ್ಯಾಟ್‌ಲೈಟ್ ಹಕ್ಕು ಬರೋಬ್ಬರಿ 15 ಕೋಟಿಗೆ ಸೇಲ್ ಆಗಿದೆಯಂತೆ. ಅಧಿಕೃತವಾಗಿ ಚಿತ್ರತಂಡ ಹೇಳದೇ ಹೋದರು ಆಪ್ತ ವಲಯದಿಂದ ಈ ಸುದ್ದಿ ಸೋರಿಕೆಯಾಗಿದೆ.
ಜೇಮ್ಸ್ ಸಿನಿಮಾದಲ್ಲಿ ಬಹುದೊಡ್ಡ ತಾರಬಳಗವಿದೆ. ತಮಿಳು ನಟ ಶರತ್ ಕುಮಾರ್ ಈ ಚಿತ್ರದಲ್ಲಿಯೂ ನಟಿಸುತ್ತಿದ್ದು, ಈ ಸಲ ನೆಗೆಟಿವ್ ಪಾತ್ರ ಆಗಿದೆ. ಈ ಹಿಂದೆ ರಾಜಕುಮಾರ ಸಿನಿಮಾದಲ್ಲಿ ಪುನೀತ್ ಅವರ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶರತ್ ಕುಮಾರ್ ಈಗ ಅಪ್ಪು ಎದುರು ವಿಲನ್ ಆಗಿ ಮಿಂಚಲಿದ್ದಾರೆ.