ತುರ್ತು Z ಶ್ರೇಣಿ ಭದ್ರತೆ ನೀಡುವಂತೆ ಸಿಎಂ ಸೇರಿ ಕೇಂದ್ರ–ರಾಜ್ಯ ನಾಯಕರಿಗೆ ಜನಾರ್ದನ ರೆಡ್ಡಿ ಪತ್ರ
ಬೆಂಗಳೂರು: ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಅವರ ಗೂಂಡಾ ಸಹಚರರು ಪೆಟ್ರೋಲ್ ಬಾಂಬ್ ಮತ್ತು ಬಂದೂಕು ಬಳಸಿ ತನ್ನ ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ, ಶಾಸಕ ಗಾಲಿ ಜನಾರ್ದನ ರೆಡ್ಡಿ ತಮಗೆ ತುರ್ತು ‘Z’ ಶ್ರೇಣಿಯ ಭದ್ರತೆ ಒದಗಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಜನಾರ್ದನ ರೆಡ್ಡಿ ತಮ್ಮ ಪತ್ರದಲ್ಲಿ, “ಅತ್ಯಂತ ಆಘಾತ ಮತ್ತು ಆಕ್ರೋಶದೊಂದಿಗೆ ಈ ಪತ್ರ ಬರೆಯುತ್ತಿದ್ದೇನೆ. 01-01-2026ರಂದು, ಹೊಸ ವರ್ಷದ ದಿನವೇ ಬಳ್ಳಾರಿಯ ನನ್ನ ನಿವಾಸದ ಮೇಲೆ ನಡೆದ ಭೀಕರ ದಾಳಿ ಸಾಮಾನ್ಯ ರಾಜಕೀಯ ಘರ್ಷಣೆಯಲ್ಲ. ಇದು ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಅವರ ಗೂಂಡಾ ಪಡೆ ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ನಡೆಸಿದ ಪೂರ್ವನಿಯೋಜಿತ ಹತ್ಯೆಯ ಸಂಚು” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಜ.1ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಾರಾ ಭರತ್ ರೆಡ್ಡಿಯವರ ಬೆಂಬಲಿಗರು ತಮ್ಮ ಮನೆಯ ಫೆನ್ಸಿಂಗ್ ಆವರಣದಲ್ಲಿ ಅಕ್ರಮವಾಗಿ ಬ್ಯಾನರ್ ಹಾಕಲು ಯತ್ನಿಸಿದ್ದಾರೆ. ನಿವಾಸದ ಸಿಬ್ಬಂದಿ ಮತ್ತು ಪೊಲೀಸರ ಮಧ್ಯಪ್ರವೇಶದಿಂದ ಅವರನ್ನು ಹಿಂದಕ್ಕೆ ಕಳುಹಿಸಲಾಯಿತು ಎಂದು ತಿಳಿಸಿದ್ದಾರೆ.
ಸಂಜೆ 5:30 ಗಂಟೆಗೆ ನಾರಾ ಭರತ್ ರೆಡ್ಡಿಯವರ ಆಪ್ತ ಸತೀಶ್ ರೆಡ್ಡಿ 40–50 ಗೂಂಡಾಗಳೊಂದಿಗೆ ಬಿಯರ್ ಬಾಟಲ್‌ಗಳು, ಕಲ್ಲುಗಳು ಹಾಗೂ ಮಾರಕಾಸ್ತ್ರಗಳನ್ನು ಹಿಡಿದು ತಮ್ಮ ಮನೆಯ ಆವರಣದೊಳಗೆ ಅಕ್ರಮವಾಗಿ ನುಗ್ಗಿದ್ದಾರೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಕುರ್ಚಿ ಹಾಕಿ ಕುಳಿತು “ಯಾರು ಬರುತ್ತಾರೋ ನೋಡುತ್ತೇವೆ” ಎಂದು ಸವಾಲು ಹಾಕಲಾಗಿದೆ ಎಂದು ತಿಳಿಸಿದ್ದಾರೆ.






