“ನಾನು ಎಲ್ಲರಂತಲ್ಲ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಮತ್ತೊಮ್ಮೆ ಗರಂ ಆಗಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಾಗ ವಿಧಾನಸೌಧದಲ್ಲಿ ನಡೆಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ, “ಹಿಂದೆನಾಗಿದೆ ನನಗೇ ಬೇಕಿಲ್ಲ. ನಾನು ಎಲ್ಲರಂತಲ್ಲ” ಎಂದು ಖಡಕ್ ಆದೇಶ ಕೊಟ್ಟಿದ್ದರು. ಆ ಮೂಲಕ ತಾವು ಈ ಹಿಂದಿನ ಯಾವುದೇ ಮುಖ್ಯಮಂತ್ರಿಗಳಂತೆ ಅಲ್ಲ ಎಂದು ಎಚ್ಚರಿಸಿದ್ದರು.
ಇದೀಗ ದೆಹಲಿಯಲ್ಲಿ ನಡೆದ ಕಾನೂನು ತಜ್ಞರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗರಂ ಆಗಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ವಕಾಲತ್ತು ವಹಿಸುವ ಹಿರಿಯ ವಕೀಲರ ತಂಡಕ್ಕೆ ಬೊಮ್ಮಾಯಿ ಖಡಕ್ ಸಂದೇಶ ನೀಡಿದ್ದಾರೆ. “ನಾನು ಖಡಕ್ ಮುಖ್ಯಮಂತ್ರಿ. ಬೇರೆ ಮುಖ್ಯಮಂತ್ರಿಗಳಂತೆ ನಾನಲ್ಲ. ಹಿಂದಿನಿಂದಲೂ ಕೆಲಸ ಮಾಡಿಕೊಂಡು ಬಂದಿದ್ದಿರಿ. ರಾಜ್ಯದ ಜಲ ವ್ಯಾಜ್ಯಗಳಿಗೆ ಇನ್ನು ಮುಂದೆ ವೇಗ ಸಿಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು” ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಆದರೆ ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆಯಾ? ಕೃಷ್ಣಾ ಮೇಲ್ದಂಡೆ ಯೋಜನೆಗೆ ಬೇಕಾಗಿರುಯವ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದೆಯಾ? ಎಂಬುದಕ್ಕೆ ಜಲಸಂಪನ್ಮೂಲ ಸಚಿವರಾಗಿಯೂ ಈ ಹಿಂದೆ ಕೆಲಸ ನಿರ್ವಹಿಸಿದ್ದ ಸಿಎಂ ಬೊಮ್ಮಾಯಿ ಉತ್ತರಿಸಬೇಕಿದೆ.