ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನೂ ಐದೇ ದಿನ ಬಾಕಿ ಇದ್ದು, ರಾಜಕೀಯ ಪಕ್ಷಗಳು ಗೆಲುವಿನ ಲೆಕ್ಕಾಚಾರ ಹಾಕ್ತಿವೆ. ಆದ್ರೆ ಯಾವ ಪಕ್ಷಕ್ಕೂ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ಬಂದರೆ ಹೇಗೆ ಎಂಬ ಪ್ರಶ್ನೆಯೂ ಇದೀಗ ಮೂಡಿದೆ.
ಅತಂತ್ರ ಪರಿಸ್ಥಿತಿಯಲ್ಲಿ ಪ್ರಧಾನಿ ಹುದ್ದೆಗೇರಲು ಈಗಾಗಲೇ ಕೆಲ ನಾಯಕರು ಕೂಡಾ ರೆಡಿಯಾಗಿದ್ದಾರಂತೆ. ಇದೆಲ್ಲದರ ನಡುವೆ ದೇವೇಗೌಡರಿಗೆ ಮತ್ತೊಮ್ಮೆ ಪ್ರಧಾನಿ ಹುದ್ದೆಗೇರುವ ಅವಕಾಶವಿದೆ ಅಂತಾ ಹೇಳಲಾಗ್ತಿದೆ.
ಇದಕ್ಕೆ ಕಾರಣ ದಸರಿಘಟ್ಟ ಚೌಡೇಶ್ವರಿ ಅಮ್ಮನ ಕಳಸ ಬರಹದ ಭವಿಷ್ಯ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿರುವ ಈ ದಸರಿಘಟ್ಟ ಚೌಡೇಶ್ವರಿ ದೇವಿಯ ಕಳಸ ಭವಿಷ್ಯ ಭಾರಿ ಖ್ಯಾತಿ ಪಡೆದಿದೆ. ಈ ಹಿಂದೆಯೂ ಕೂಡಾ ದೇವೇಗೌಡರು ಪ್ರಧಾನಿಯಾಗ್ತಾರೆ ಎಂಬ ಭವಿಷ್ಯವನ್ನು ಚೌಡೇಶ್ವರಿ ದೇವಿ ನುಡಿದಿತ್ತು.
ಆದ್ರೆ ದೇವೇಗೌಡರು ಈ ದೇವಿಯ ಉತ್ಸವಕ್ಕೆ ಗೈರಾದಾಗ ಮುನಿಸಿಕೊಂಡ ದೇವಿ 11 ತಿಂಗಳ ಬಳಿಕ ಅಧಿಕಾರ ಕಳೆದುಕೊಳ್ತಾರೆ ಅಂತಾ ಭವಿಷ್ಯ ಹೇಳಿತ್ತಂತೆ.
ಈ ಮಧ್ಯೆ ದೇವೇಗೌಡರಿಗೆ ಈ ಬಾರಿ ಯೋಗ ಚೆನ್ನಾಗಿದ್ದು, ಅವರು ಉನ್ನತ ಮಟ್ಟಕ್ಕೆ ಏರುವ ಸಾಧ್ಯತೆಯಿದೆ ಎಂದು ದಸರಿಘಟ್ಟ ಕ್ಷೇತ್ರದ ಶ್ರೀಗಳಾದ ಚಂದ್ರಶೇಖರನಂದನಾಥ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.
ಅಷ್ಟೆ ಅಲ್ಲಾ, ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗಲೇ ಅವರು ಪ್ರಧಾನಿಯಾಗ್ತಾರೆ ಅಂತಾ ಚೌಡೇಶ್ವರಿ ದೇವಿ ಭವಿಷ್ಯ ನುಡಿದಿತ್ತಂತೆ. ಆದ್ರೆ ಅವರು ಪ್ರಧಾನಿಯಾದ ಬಳಿಕ 3 ಬಾರಿ ತುಮಕೂರಿಗೆ ಬಂದ್ರೂ ಒಮ್ಮೆಯೂ ದೇವಿ ದರ್ಶನಕ್ಕೆ ಬಂದಿಲ್ಲ. ಹೀಗಾಗಿ ಪ್ರಧಾನಿ ದೇವಿಯ ಅವಕೃಪೆಗೆ ಕಾರಣವಾಗಬಹುದು ಎಂದು ಹೇಳಲಾಗ್ತಿದೆ.