ದೇಶದ ಮೊದಲ ಮಹಿಳಾ ಸರ್ಫರ್ ಬಗ್ಗೆ ತಿಳಿದಿದ್ದೀರಾ?
ನೀವು, ನೋಡಿರಬಹುದು, ಇವರು ಸರ್ಫರ್ ಅಥವಾ ಕಡಲ ಸವಾರಿಗಾರ್ತಿ ಇಶಿತಾ ಮಾಳವಿಯಾ. ಇವರು ಭಾರತದ ಮೊತ್ತ ಮೊದಲ ವೃತ್ತಿಪರ ಮಹಿಳಾ ಸರ್ಫರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸರ್ಫರ್ ನಲ್ಲಿ ಈಗ ದೇಶ-ವಿದೇಶಗಳಲ್ಲೂ ಭಾರಿ ಖ್ಯಾತಿ. ಹಲವರಿಗೆ ಸಮುದ್ರದ ಮೇಲೆ ಹೇಗೆ ಸವಾರಿ ಮಾಡಬೇಕೆನ್ನುವುದನ್ನು ಕಲಿಸುತ್ತಿರುವ ತರಬೇತಿಗಾರ್ತಿ ಯೂ ಹೌದು.
ಇಶಿತಾ ಹುಟ್ಟಿದ್ದು ಕಡಲ ತೀರದ ನಗರಿ ಮುಂಬೈನಲ್ಲಿ. ಬಾಲ್ಯದಿಂದಲೂ ಹೆಚ್ಚಾಗಿ ಹೊರಗೆ ಆಟವಾಡುತ್ತಾ ಕಾಲ ಕಳೆಯಲು ಇಷ್ಟಪಡುತ್ತಿದ್ದ ಹುಡುಗಿ ಇವರು. ಮನೆಯಿಂದ ಹೊರಗೆ ಬರಲು ಇಷ್ಟಪಡದ ನಗರದಲ್ಲಿ ಹುಟ್ಟಿ, ಬೆಳೆದ ಹೆಣ್ಣುಮಕ್ಕಳಂತಿರದೇ, ಟೀನೇಜ್ನಿಂದಲೂ ಅಸ್ತವ್ಯಸ್ತ ಹಾಗೂ ಗಲಿಬಿಲಿಗಳಿಂದ ಕೂಡಿದ ನಗರ ಜೀವನದಿಂದ ದೂರ ಹಚ್ಚ ಹಸಿರಿನ ವಾತಾವರಣದಲ್ಲಿ ಇರಲು ಇಷ್ಟಪಡುತ್ತಿದ್ದ ಹುಡುಗಿ.
ಟೀನೇಜ್ ನಲ್ಲೇ ಇಶಿತಾಗೆ ಸರ್ಫಿಂಗ್ನತ್ತ ವಿಶೇಷ ಒಲವು ಮೂಡಿತು. ಆದರೆ, ಭಾರತದಲ್ಲಿ ಸರ್ಫಿಂಗ್ ಮಾಡುವಂತಹ ಅಲೆಗಳಿಲ್ಲ, ಹೀಗಾಗಿ ವಿದೇಶಗಳಿಗೇ ಹೋಗಬೇಕಾಗುತ್ತೆ ಅಂತಂದುಕೊಂಡು ಸುಮ್ಮನಾಗಿದ್ದರು. 2007ರಲ್ಲಿ ಇಶಿತಾ ಉನ್ನತ ವ್ಯಾಸಂಗಕ್ಕಾಗಿ ಮುಂಬೈನಿಂದ ನಮ್ಮ ಕರ್ನಾಟಕದ ಮಣಿಪಾಲಿಗೆ ಬಂದರು. ಈ ಕರಾವಳಿ ನಗರದಲ್ಲಿ ಅವರಿಗೊಂದು ಆಶ್ಚರ್ಯ ಕಾದಿತ್ತು.
ಮಣಿಪಾಲದಲ್ಲಿ ಕಾಕತಾಳೀಯವೆಂಬಂತೆ ಇಶಿತಾ ಮತ್ತು ಅವರ ಗೆಳೆಯ ತುಷಾರ್ ಇಬ್ಬರಿಗೂ, ಭಾರತಕ್ಕೆ ಓದಲು ಬಂದಿದ್ದ ಜರ್ಮನಿ ಮೂಲದ ವಿದ್ಯಾರ್ಥಿಯೊಬ್ಬನ ಪರಿಚಯವಾಯ್ತು. ವಿಶೇಷ ಅಂದ್ರೆ ಆತನ ಬಳಿ ಸ ರ್ಫ್ಬೋರ್ಡ್ ಇತ್ತು. ಕ್ಯಾಲಿಫೋರ್ನಿಯಾದಿಂದ ಬಂದಿರುವ ಕೆಲ ವಿದೇಶಿಗರು ಸಮೀಪದಲ್ಲೇ ಇರುವ ಆಶ್ರಮವೊಂದರಲ್ಲಿದ್ದು, ಅವರು ಸರ್ಫಿಂಗ್ ಮಾಡುತ್ತಿದ್ದಾರಂತೆ.
ಈ ವಿಷಯ ತಿಳಿದು ಇಶಿತಾ – ತುಷಾರ್, ಜೋಡಿ ಒಂದು ಗಂಟೆಯೊಳಗೆ ಆ ಸ್ಥಳಕ್ಕೆ ಹೋದರು. ವಿದೇಶಿಗರ ಮನವೊಲಿಸಿ ತಾವೂ ಸರ್ಫಿಂಗ್ ಮಾಡಲು ರೆಡಿಯಾಗಿಬಿಟ್ಟರು. ಒಂದೇ ಬೋರ್ಡ್ ಮೇಲೆ ಇಬ್ಬರು ಸವಾರಿ ಮಾಡಿದ್ರು. 2007ರಲ್ಲಿ ಇಶಿತಾ ಸರ್ಫಿಂಗ್ ಪ್ರಾರಂಭಿಸಿದಾಗ ಈ ಕ್ರೀಡೆಯ ಕುರಿತು ಭಾರತೀಯರಿಗೆ ಗೊತ್ತೇ ಇರಲಿಲ್ಲವಂತೆ.
ಇನ್ನು ಸರ್ಫಿಂಗ್ ಹುಡುಗರ ಟೀಮ್ ನಲ್ಲಿ ಇಶಿತಾ ಒಬ್ಬಳೇ ಹುಡುಗಿಯಂತೆ. ಅಲ್ಲದೇ, ದೊಡ್ಡ ಅಲೆಗಳ ಮೇಲೆ ಹುಡುಗರು ನಿರಾಯಾಸವಾಗಿ ಸರ್ಫಿಂಗ್ ಮಾಡುತ್ತಿದ್ದರೆ, ಇಶಿತಾಗೆ ಕೆಲವೊಮ್ಮೆ ಭಯವೂ ಆಗುತ್ತಿತ್ತಂತೆ. ಆದ್ರೆ, ಗಟ್ಟಿಗಿತ್ತಿ ಇಶಿತಾ, ಸೋಲನ್ನು ಒಪ್ಪಿಕೊಳ್ಳಲಿಲ್ಲ. ಛಲದಿಂದ ಮುನ್ನುಗ್ಗಿದ ಕಾರಣವೇ ಇಂದು ಇಶಿತಾ, ಭಾರತದ ಮೊತ್ತ ಮೊದಲ ವೃತ್ತಿಪರ ಮಹಿಳಾ ಸರ್ಫರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಶಿತಾ, ಸಾಗರದ ಮೇಲೆ ಸವಾರಿ ಮಾಡುವುದನ್ನು ನೋಡಿಯೇ ಭಾರತದಲ್ಲಿ ಸರ್ಫಿಂಗ್ಗೆ ಈಗೀಗ ಹೆಚ್ಚಿನ ಪ್ರಾಮುಖ್ಯತೆ ಬರುತ್ತಿದೆ. ಹೆಣ್ಣುಮಕ್ಕಳೂ ಇತ್ತೀಚಿನ ದಿನಗಳಲ್ಲಿ ಇತ್ತ ಆಕರ್ಷಿತರಾಗುತ್ತಿದ್ದಾರೆ. ವಿಶೇಷ ಅಂದ್ರೆ 65 ವರ್ಷದ ಹಿರಿಯ ಮಹಿಳೆಯೊಬ್ಬರು ಇಶಿತಾ ಬಳಿ ಸರ್ಫಿಂಗ್ ತರಬೇತಿ ಪಡೆಯುತ್ತಿದ್ದಾರೆ. ‘ ಬಿಯಾಂಡ್ ದಿ ಸರ್ಫೇಸ್ ’ ಎಂಬ ಮೊಟ್ಟ ಮೊದಲ ಸಂಪೂರ್ಣ ಮಹಿಳಾ ಸರ್ಫಿಂಗ್ ಕುರಿತ ಡಾಕ್ಯುಮೆಂಟರಿಯಲ್ಲೂ ಮಿಂಚಿದ್ದಾರೆ ಇಶಿತಾ.
ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಸೇರಿದಂತೆ ಹಲವು ದೇಶಗಳ ಕಡಲಿನಲ್ಲಿ, ಅಲೆಗಳ ಮೇಲೆ ಸವಾರಿ ಮಾಡಿರುವ ಹೆಗ್ಗಳಿಕೆ ಇಶಿತಾ ಅವರದು. ಶಾಕಾ ಸರ್ಫ್ ಕ್ಲಬ್ ಜೊತೆಗೆ ಇಶಿತಾ, ಭಾರತದಲ್ಲೇ ಮೊತ್ತ ಮೊದಲ ಪ್ರಯತ್ನ ಎನಿಸಿಕೊಂಡ ಕ್ಯಾಂಪ್ ನಮಲೋಹಾ ಕೂಡ ನಡೆಸುತ್ತಿದ್ದಾರೆ. ಸ್ಥಳೀಯ ಸರ್ಕಾರಿ ಮಕ್ಕಳಿಗೆ ಜೂನಿಯರ್ ಲೈಫ್ ಗಾರ್ಡ್ಸ್ ತರಬೇತಿ ನೀಡುತ್ತಿದ್ದಾರೆ.
ಇಶಿತಾ ತಾನು ಕಂಡ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇನ್ನೂ ಹಲವರ ಕನಸುಗಳನ್ನು ನನಸು ಮಾಡುವತ್ತ ಗಮನ ಹರಿಸಿದ್ದಾರೆ. ಈ ಮೂಲಕ ಕೋಟ್ಯಂತರ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ ಇಶಿತಾ. ಅವರಿಗೆ ಶುಭವಾಗಲಿ ಅಂತ ನಾವೂ ಹಾರೈಸೋಣ. ಅಲ್ಲವೇ?