ನಮ್ಮ ಕಥೆಯೇ ಹೀಗಾದರೆ ಸಾಮಾನ್ಯರ ಗತಿಯೇನು: ಸಿದ್ದರಾಮಯ್ಯ

1
32

ಬೆಂಗಳೂರು, ಮೇ 29: ಕೊರೊನಾ ಸೋಂಕಿಗೆ ಲಸಿಕೆ ನೀಡಲು ಖಾಸಗಿಯವರಿಗೆ ಅವಕಾಶ ನೀಡಲಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ಲೂಟಿ ಹೊಡೆಯುತ್ತಿವೆ. ಒಂದೊಂದು ಆಸ್ಪತ್ರೆಯಲ್ಲೂ ಲಸಿಕೆಗೆ ಒಂದೊಂದು ದರವಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಲಸಿಕೆಗಳಿಗೆ ಏಕರೂಪದ ದರ ನಿಗದಿ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಾತನಾಡಿದ ಸಿದ್ದರಾಮಯ್ಯ, “ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಒಂದೊಂದು ರೀತಿ ದರವಿದೆ. 900ರೂ ಇಂದ 1250ರೂವರೆಗೆ ದರ ನಿಗದಿ ಮಾಡಲಾಗಿದೆ. ಹೀಗಾದರೆ ಬಡವರ ಸ್ಥಿತಿ ಏನು?” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಸಿಗದ ಲಸಿಕೆ ಖಾಸಗಿಯವರಿಗೆ ಹೇಗೆ ಸಿಗುತ್ತಿದೆ ಎಂದು ಕೇಳಿದ್ದಾರೆ.

ರಾಜ್ಯದಲ್ಲಿನ ಆಮ್ಲಜನಕ ಸರಬರಾಜು ಕುರಿತು ಮಾತನಾಡಿರುವ ಅವರು, “ರಾಜ್ಯಕ್ಕೆ ಒಂದು ದಿನಕ್ಕೆ 1750 ಮೆಟ್ರಿಕ್ ಟನ್ ಆಕ್ಸಿಜನ್ ಬೇಕು. ಆದರೆ ಬರುತ್ತಿರುವುದು 1050 ಮೆಟ್ರಿಕ್ ಟನ್ ಮಾತ್ರ. ಇನ್ನೂ 700 ಮೆಟ್ರಿಕ್ ಟನ್ ಕೊರತೆಯಿದೆ” ಎಂದು ಹೇಳಿದರು.

ಈಗ ಬ್ಲಾಕ್, ವೈಟ್, ಯೆಲ್ಲೋ ಫಂಗಸ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿದೆ. ನನ್ನ ಪರಿಚಿತರೊಬ್ಬರಿಗೆ ಬ್ಲಾಕ್ ಫಂಗಸ್ ಬಂದಿದೆ. ದಿನಕ್ಕೆ ನಾಲ್ಕು ಇಂಜೆಕ್ಷನ್ ತೆಗೆದುಕೊಳ್ಳಬೇಕು. ಆ ಇಂಜೆಕ್ಷನ್ ಗಾಗಿ ನಾನು ಪರದಾಡಿದೆ. ಅಶೋಕ್, ಸುಧಾಕರ್‌ಗೂ ಫೋನ್ ಮಾಡಿದೆ. ಖಾಸಗಿ ಆಸ್ಪತ್ರೆಯವರಿಗೂ ಕಾಲ್ ಮಾಡಿದೆ. ಕೊನೆಗೆ 58 ಇಂಜೆಕ್ಷನ್ ಒದಗಿಸೋಕೆ ಪರದಾಡುವಂತಾಯಿತು. ನಾನೇ ಈ ರೀತಿ ಪರದಾಡಬೇಕಾದ್ರೆ ಸಾಮಾನ್ಯರ ಕಥೆಯೇನು ಎಂದು ಕೇಳಿದರು.

ಕೊರೊನಾ ಮೂರನೇ ಅಲೆ ಮುನ್ಸೂಚನೆ ಹಿನ್ನೆಲೆಯಲ್ಲಿ ಕೆಪಿಸಿಸಿ ಮಹಿಳಾ ಘಟಕ ಸಿದ್ಧಪಡಿಸಿರುವ ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥ ಹಾಗೂ ಔಷಧಗಳನ್ನೊಳಗೊಂಡ ಕಿಟ್‌ಗಳನ್ನು ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿತರಣೆ ಮಾಡಿದರು.

 

 

1 COMMENT

LEAVE A REPLY

Please enter your comment!
Please enter your name here