ನಮ್ಮ ಹೋರಾಟದಿಂದಲೇ ಉಚಿತ ಲಸಿಕೆ ಘೋಷಣೆ: ಡಿಕೆಶಿ

0
24

”ನಾವು ಹೋರಾಟ ಮಾಡಿದ ಫಲವಾಗಿ ಈಗ ಉಚಿತ ಲಸಿಕೆ ಘೋಷನೆ ಮಾಡಲಾಗಿದೆ. ಕೇಂದ್ರ ಸರ್ಕಾರವು ನಾವು ಪ್ರತಿಭಟಿಸಿದ್ದರಿಂದ ದೇಶದಾದ್ಯಂತ ಉಚಿತ ಲಸಿಕೆ ಘೋಷಣೆ ಮಾಡಿದೆ” ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

 

ಸೋಮವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ”18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೇಂದ್ರ ಸರ್ಕಾರದಿಂದ ಉಚಿತ ಕೊರೊನಾ ಲಸಿಕೆ ನೀಡಲಾಗುವುದು” ಎಂದು ಘೋಷಣೆ ಮಾಡಿದ್ದರು. ಹಾಗೆಯೇ ”ರಾಜ್ಯಗಳ ಲಸಿಕೆಗಳ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡಲು ಕೇಂದ್ರ ಕ್ರಮ ಕೈಗೊಂಡಿದೆ” ಎಂದು ಹೇಳಿದ್ದರು.

ಈ ಉಚಿತ ಲಸಿಕೆ ವಿಚಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ”ಎಲ್ಲಾ ರಾಜ್ಯಗಳಲ್ಲಿ ನಮ್ಮ ಪಕ್ಷದವರು ರಾಜ್ಯಪಾಲರನ್ನು ಭೇಟಿ ಮಾಡಿ, ಉಚಿತ ಲಸಿಕೆಗೆ ಒತ್ತಾಯಿಸಿದ್ದಾರೆ. ನಮ್ಮ ಹೋರಾಟದ ಫಲವಾಗಿ ಈ ಉಚಿತ ಲಸಿಕೆ ಘೋಷಣೆ ಮಾಡಲಾಗಿದೆ” ಎಂದಿದ್ದಾರೆ.

 

ಇನ್ನು ”ನಾವು ನಮ್ಮ ಶಾಸಕರ ನಿಧಿಯಿಂದ ಲಸಿಕೆ ನೀಡಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದೆವು. ಆದರೆ ಸರ್ಕಾರ ಅದನ್ನು ನಿರಾಕರಿಸಿತ್ತು. ಈ ಮೂಲಕ ಜನರ ಜೀವ ರಕ್ಷಿಸಲು ಸಕಾರ ನಿರಾಕರಿಸಿದೆ. ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದಷ್ಟೇ ಕರ್ನಾಟಕ ಬಿಜೆಪಿ ಸರ್ಕಾರ ವಿಫಲವಾಗಿದೆ” ಎಂದು ಆರೋಪಿಸಿದರು.

”ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಸರ್ಕಾರ ಎಚ್ಚೆತ್ತು ಲಸಿಕೆ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳು ಕೂಡಾ ಜನರ ಪರವಾಗಿ, ಜನರ ಧ್ವನಿಯಾಗಿ ಕಾರ್ಯನಿರ್ವಹಿಸಿದೆ. ಈ ಹಿನ್ನೆಲೆ ನಾನು ನ್ಯಾಯಾಲಯ ಹಾಗೂ ಮಾಧ್ಯಮಕ್ಕೆ ಧನ್ಯವಾದ ತಿಳಿಸುತ್ತೇನೆ” ಎಂದು ಕೂಡಾ ಈ ವೇಳೆಯೇ ಹೇಳಿದ್ದಾರೆ.

LEAVE A REPLY

Please enter your comment!
Please enter your name here