ನಾನು ರಾಮ ಭಕ್ತ, ನಾವು ಯಾವುದೇ ಧ್ವಜದ ವಿರೋಧಿಗಳಲ್ಲ !

0
136

ಬೆಂಗಳೂರು:ಸಂವಿಧಾನದಡಿಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲಷ್ಟೇ ಅವಕಾಶವಿದೆ. ಇದರ ಹೊರತಾಗಿ ಯಾವುದೇ ರಾಜಕೀಯ, ಧಾರ್ಮಿಕ ಧ್ವಜ ಹಾರಿಸಲು ಅವಕಾಶವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು. ಅವರು ಇಂದು ಕೆರಗೂಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹನುಮ ಧ್ವಜ ಹಾರಿಸಿರುವ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಬಹುದು. ಅದು ಹೊರತು ಪಡಿಸಿ ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನು ಹಾರಿಸುವಂತಿಲ್ಲ. ತ್ರಿವರ್ಣ ಧ್ವಜಕ್ಕೆ ಅನುಮತಿ ಪಡೆದು ಬೇರೆ ಧ್ವಜ ಹಾರಿಸೋದು ತಪ್ಪು. ನಾಳೆ ಬೆಳಿಗ್ಗೆ ಡಿಸಿ ಕಚೇರಿ ಮುಂದೆ ಹಾರಿಸ್ತೀನಿ ಅಂತಾರೆ. ಆಗ ಅವಕಾಶ ಕೊಡಲು ಆಗುತ್ತಾ.? ಇದು ಒಂದು ಕಡೆ ಅವಕಾಶ ಕೊಟ್ರೆ ಎಲ್ಲಾ ಕಡೆ ಕೇಳ್ತಾರೆ.‌ ಇದು ತಪ್ಪು ಎಂದರು.
ಸ್ಥಳೀಯ ಯುವಕರು ಒಳ್ಳೆಯವರೇ ಅವರನ್ನ ದಾರಿ ತಪ್ಪಿಸುತ್ತಿದ್ದಾರೆ. ಎಲ್ಲಾ ಯುವಕರ ಜೊತೆ ಮಾತನಾಡುತ್ತೇನೆ. ಬೇರೆ ಸ್ಥಳದಲ್ಲಿ ಹನುಮಾನ್ ಧ್ವಜ ಹಾರಿಸಲು ಖಾಸಗಿ ಜಾಗದಲ್ಲಿ ಅಥವಾ ದೇವಾಲಯದ ಮುಂದೆ ಹಾಕಲು ಅವಕಾಶ ಕೊಡೊಣ ಆದರೆ ಸರ್ಕಾರಿ ಕಛೇರಿ ಮುಂದೆ ಬೇಡ ಎಂದರು‌.
ನಾನು ರಾಮ ಭಕ್ತ, ನಮ್ಮ ಮನೆ ದೇವರು ವಿಷ್ಣು. ನಾವು ಯಾವುದೇ ಧ್ವಜದ ವಿರೋಧಿಗಳಲ್ಲ. ಪಂಚಾಯ್ತಿಯಲ್ಲಿ ಸಭೆಯಲ್ಲಿ ಹನುಮ ಧ್ವಜ ಹಾರಿಸಲು ಅನುಮೋದನೆ ನೀಡದ್ದರೆ ತಪ್ಪು. ಅವರ ವಿರುದ್ಧವೂ ಕ್ರಮ ಆಗುತ್ತದೆ. ಇದರಲ್ಲಿ ನಾನಾಗಲಿ, ಸ್ಥಳೀಯ ಶಾಸಕರಾಗಲಿ ರಾಜಕೀಯ ಮಾಡ್ತಿಲ್ಲ. ಸರ್ಕಾರಿ ಕಛೇರಿ ಮುಂದೆ ಹನುಮ ಧ್ವಜ ಹಾರಿಸಿರುವುದ ಸಂವಿಧಾನ ವಿರುದ್ಧ ಆಗಿರುವುದರಿಂದ ಅದನ್ನ ತೆರವು ಮಾಡಲಾಗಿದೆ ಎಂದರು.