ನಿಂಬೆ ಬಳಸಿದ ನಂತರ ಸಿಪ್ಪೆ ಎಸೆಯಬೇಡಿ, ಪ್ರಯೋಜನ ಸಾಕಷ್ಟಿವೆ!
ನಿಂಬೆಹಣ್ಣು ಕೇವಲ ರಸಕ್ಕಾಗಿ ಮಾತ್ರವಲ್ಲ, ಅದರ ಸಿಪ್ಪೆಗಳೂ ಮನೆ ಬಳಕೆಯಲ್ಲಿ ಅನೇಕ ರೀತಿಯಲ್ಲಿ ಉಪಯುಕ್ತ. ರಸ ಹಿಂಡಿದ ನಂತರ ಸಿಪ್ಪೆಗಳನ್ನು ಎಸೆಯುವ ಬದಲು ಅವನ್ನು ಮರುಬಳಕೆ ಮಾಡುವ ಮೂಲಕ ಮನೆ ಕೆಲಸಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇವು ದುಡ್ಡು ಉಳಿಸುವುದಲ್ಲದೇ, ಪರಿಸರ ಮಾಲಿನ್ಯ ಕಡಿಮೆ ಮಾಡುವಲ್ಲಿ ಸಹ ಸಹಾಯಕ.
ನಿಂಬೆ ಸಿಪ್ಪೆಗಳ ಉಪಯೋಗಗಳು
- ಸುವಾಸನೆಗಾಗಿ: ನಿಂಬೆ ಸಿಪ್ಪೆಗಳನ್ನು ಒಣಗಿಸಿ ಸಣ್ಣ ಚೀಲಗಳಲ್ಲಿ ಹಾಕಿ ವಾರ್ಡ್ರೋಬ್ ಅಥವಾ ಶೂ ರ್ಯಾಕ್‌ನಲ್ಲಿ ಇಟ್ಟರೆ ತಾಜಾ ವಾಸನೆ ಹರಡುತ್ತದೆ.
- ಫ್ರಿಜ್ ವಾಸನೆ ನಿವಾರಣೆ: ಫ್ರಿಜ್‌ನೊಳಗಿನ ದುರ್ವಾಸನೆ ಹೋಗಲು ಸಿಪ್ಪೆ ತುಂಡುಗಳನ್ನು ಒಳಗೆ ಇಡಬಹುದು. ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ವಾತಾವರಣ ಸ್ವಚ್ಛವಾಗುತ್ತದೆ.
- ನೈಸರ್ಗಿಕ ಕ್ಲೀನರ್: ನಿಂಬೆ ಸಿಪ್ಪೆಗಳನ್ನು ಗಾಜಿನ ಬಾಟಲಿಯಲ್ಲಿ ಹಾಕಿ, ಅದರ ಮೇಲೆ ವಿನೆಗರ್ ಸುರಿದು ಎರಡು ವಾರ ನೆನೆಯಲು ಬಿಡಬೇಕು. ನಂತರ ಅದನ್ನು ಸೋಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿ ಅಡುಗೆಮನೆ, ಕೌಂಟರ್‌ಗಳು, ಸಿಂಕ್ ಹಾಗೂ ಗಾಜಿನ ಸಾಮಗ್ರಿಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಸ್ವಲ್ಪ ಅಡುಗೆ ಸೋಡಾ ಸೇರಿಸಿದರೆ ಪಾತ್ರೆಗಳು ಹೊಸದಂತೆ ಹೊಳೆಯುತ್ತವೆ.
- ಅಡುಗೆಯಲ್ಲಿ ಉಪಯೋಗ: ಒಣಗಿಸಿದ ಸಿಪ್ಪೆಗಳನ್ನು ಪುಡಿ ಮಾಡಿ ಚಹಾ, ಕರಿಗಳು, ಸಲಾಡ್, ಸಿಹಿತಿಂಡಿ ಹಾಗೂ ಕೇಕ್‌ಗಳಿಗೆ ಸೇರಿಸಬಹುದು. ಇದರಿಂದ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.
- ಕಟಿಂಗ್ ಬೋರ್ಡ್ ಸ್ವಚ್ಛತೆ: ತರಕಾರಿ ಕತ್ತರಿಸುವ ಬೋರ್ಡ್‌ಗಳನ್ನು ನಿಂಬೆ ಸಿಪ್ಪೆಯಿಂದ ಉಜ್ಜಿದರೆ ನೈಸರ್ಗಿಕ ನಂಜುನಿರೋಧಕದಂತೆ ಕೆಲಸ ಮಾಡುತ್ತದೆ.
- ತೋಟಗಾರಿಕೆ: ತಿಂಗಳಿಗೊಮ್ಮೆ ನಿಂಬೆ ತುರಿಯನ್ನು ಮಣ್ಣಿಗೆ ಸೇರಿಸಿದರೆ ವಿಶೇಷವಾಗಿ ಗುಲಾಬಿ ಗಿಡಗಳಿಗೆ ಉತ್ತಮ. ಹೂವುಗಳ ಅರಳಿಕೆ ಹೆಚ್ಚಾಗುತ್ತದೆ.
- ಮನೆಯ ವಾತಾವರಣ ತಾಜಾ ಮಾಡಲು: ನಿಂಬೆ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ ಮನೆಯಾದ್ಯಂತ ಹಬೆ ಹರಡಲು ಬಿಡಿದರೆ ದುರ್ವಾಸನೆ ಹೋಗಿ ತಾಜಾತನ ನೀಡುತ್ತದೆ.
- ಸೆರಾಮಿಕ್ ಸಿಂಕ್ ಕ್ಲೀನಿಂಗ್: ನಿಂಬೆ ಸಿಪ್ಪೆಗೆ ಸ್ವಲ್ಪ ಸರ್ಫ್ ದ್ರವ ಸೇರಿಸಿ ಸಿಂಕ್ ಉಜ್ಜಿದರೆ ಬಣ್ಣಗಳು ಹೊಸದಂತೆ ಹೊಳೆಯುತ್ತವೆ.






