ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರ ಜತೆಗೆ ನಿಪಾ ವೈರಸ್ ಇನ್ನಿತರೆ ಸೋಂಕುಗಳ ಭಯದಿಂದಾಗಿ ರಸ್ತೆಬದಿಯ ತಿನಿಸುಗಳ ಬಳಿ ಇರುವ ಜನಸಂದಣಿಯನ್ನು ಗಮನಿಸಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳ ಮೇಲೆ ನಿಗಾ ಇಡಲು ನಿರ್ದೇಶನ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಆದರೆ, ಹೋಟೆಲ್, ರೆಸ್ಟೋರೆಂಟ್‌ಗಳ ಜತೆ ಮೃದುವಾಗಿ ವರ್ತಿಸುತ್ತಿರುವಾಗ ರಸ್ತೆಬದಿ ವ್ಯಾಪಾರಿಗಳ ಮೇಲೆ ಕಣ್ಣೇಕೆ, ಇದು ನಮ್ಮ ಆದಾಯದ ಮೂಲವಾಗಿದೆ , ಇದನ್ನು ಮುಚ್ಚಿದರೆ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಮಾರಾಟಗಾರರ ಅಳಲಾಗಿದೆ.
ತರಕಾರಿ ಹಾಗೂ ಹಣ್ಣುಗಳ ಮಾರಾಟಗಾರರು, ಚಾಟ್ ಸ್ಟಾಲ್‌ಗಳು ಹಾಗೂ ಮಾಂಸಾಹಾರಿ ಪದಾರ್ಥಗಳ ಮಾರಾಟಗಾರರ ಬಗ್ಗೆ ಸರ್ಕಾರಕ್ಕೆ ಆತಂಕವಿದೆ.
ಸರ್ಕಾರವು ಈ ಮಳಿಗೆಗಳನ್ನು ಮುಚ್ಚುವಂತೆ ಯಾವುದೇ ಆದೇಶ ಮಾಡಿಲ್ಲ. ಆದರೆ ಕೊರೊನಾ ನಿಯಮಗಳನ್ನು ಪಾಲಿಸುತ್ತಿದ್ದಾರೋ ಇಲ್ಲವೋ ಎಂಬುದರ ಮೇಲೆ ನಿಗಾ ಇಡುವಂತೆ ತಿಳಿಸಲಾಗಿದೆ.
ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣ ದೃಷ್ಟಿಯಿಂದ ಬಿಬಿಎಂಪಿ ಕೊರೊನಾ ಲಸಿಕೆ ನೀಡುವ ಸಂಬಂಧ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಲಸಿಕಾ ಕಾರ್ಯವನ್ನು ಚುರುಕುಗೊಳಿಸಿದೆ. ಲಸಿಕಾ ಕಾರ್ಯಾಚರಣೆ ಕುರಿತು ವಿಶ್ಲೇಷಣೆ ನಡೆಸಲು ಈಚೆಗೆ ಸಮೀಕ್ಷೆಯೊಂದನ್ನು ಹಮ್ಮಿಕೊಂಡಿದ್ದು, ಅದರ ಫಲಿತಾಂಶವನ್ನು ಪ್ರಕಟಿಸಿದೆ.
ಬೆಂಗಳೂರು ನಗರದಲ್ಲಿ ಸಮೀಕ್ಷೆ ಕೈಗೊಂಡಿದ್ದ ಬಿಬಿಎಂಪಿ, ಸುಮಾರು ಏಳು ಲಕ್ಷ ಮಂದಿಯಲ್ಲಿ 21% ಮಂದಿ ಎರಡೂ ಡೋಸ್‌ಗಳ ಕೊರೊನಾ ಲಸಿಕೆಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದೆ.