‘ಅಯ್ಯೋ ನನ್ನತ್ರ ಆ ಕೆಲಸ ಮಾಡೋಕೆ ಆಗುತ್ತಾ..? ನನಗೆ ಅದು ಗೊತ್ತೇ ಇಲ್ಲ..! ಈಗ ಸಿಕ್ಕಾಪಟ್ಟೆ ಬ್ಯುಸಿ, ಆ ಕೆಲ್ಸನಾ ಹೇಗ್ ಮಾಡ್ಲಿ..? ನಾನ್ ಅನ್ಕೊಂಡಿದ್ದು ಯಾವ್ದು ಆಗಲ್ಲ’…! ಎಷ್ಟು ಮಾಡಿದ್ರೂ ಒಂದೇ..! ಏನೇನೂ ಪ್ರಯೋಜನವಿಲ್ಲ’…!
ಹೀಗೆ ಎಷ್ಟೋ ನೆಪಗಳನ್ನು ಹೇಳ್ಕೊಂಡು, ನಮ್ಮತ್ರ ಆ ಕೆಲಸ ಮಾಡೋಕೆ ಆಗಲ್ಲ ಅಂತ ನಾವೇ ದೃಢ ನಿರ್ಧಾರ ಮಾಡಿ ಪ್ರಯತ್ನ ಮಾಡ್ದೇ ಸೋಲ್ತೀವಿ..! ಪರೀಕ್ಷೆ ಬರೆಯದೇ ಪಾಸ್ ಆಗಬೇಕು ಅಂದ್ರೆ ಹೇಗಿರುತ್ತೆ..? ಹಂಗಿರುತ್ತೆ ಪ್ರಯತ್ನ ಪಡದೇ ಸೋಲೋದು..!
ಇರೋದ್ ಒಂದೇ ಒಂದು ಲೈಫ್..! ಈ ಲೈಫಲ್ಲಿ ಏನ್ ಮಾಡ್ಬೇಕು ಅಂತ ಅನ್ಕೊಂಡಿದ್ದೀವೋ ಅದನ್ನೆಲ್ಲಾ ಆದಷ್ಟು ಬೇಗ ಮಾಡ್ಬೇಕು..! ನಾಳೆಗೆ ಮುಂದೂಡ್ತಾ ಹೋದ್ರೆ ಆಗಲ್ಲ..! ತುಂಬಾ ನಾಳೆಗಳೇನೋ ಬರ್ತಾವೆ..! ಆದ್ರೆ, ಆ ನಾಳೆಗಳಲ್ಲಿ ನಾವುಗಳು ಬದುಕಿರಬೇಕಲ್ಲಾ.? ಲೈಫ್ ಅನ್ನೋದು ನೀರಿನ ಮೇಲಿನ ಗುಳ್ಳೆತರ..! ಅದಕ್ಕಾಗಿ ಯಾವುದನ್ನು ನಾಳೆಗೆ ಅಂತ ಮಾತ್ರ ಮುಂದಾಕೋಕೆ ಹೋಗ್ಲೇಬೇಡಿ..!
ಮನಸ್ಸು ಮಾಡಿದ್ರೆ ಯಾವುದೂ ಅಸಾಧ್ಯವಲ್ಲ..! ಪ್ರಯತ್ನ ಮಾಡ್ಬೇಕು..! ಅದ್ ಬಿಟ್ಟು ನನ್ನತ್ರ ಆಗಲ್ಲ ಅಂತ ಡಿಸೈಡ್ ಮಾಡಿ ಹಿಂದೆಸರಿದು ಬಿಟ್ರೆ ಯಾವ ಕೆಲಸತಾನೆ ಆಗುತ್ತೆ? ಹಾಗಾಗಿ ಯಾರೂ ಕೂಡ ಯಾವುದನ್ನೂ ನಿಮ್ಮಿಂದ ಆಗಲ್ಲ ಅಂತ ಸುಮ್ನೆ ಕೂತ್ಕೋಬೇಡಿ..! ಖಂಡಿತಾ ನಿಮ್ಮಿಂದ ಆಗೇ ಆಗುತ್ತೆ..! ಪ್ರಯತ್ನ ಮಾತ್ರ ಬಿಡಬೇಡಿ..!
ಇನ್ನು ಕೆಲವರು ಇರ್ತಾರೆ, ಯಾವ್ ಕೆಲಸ ಮಾಡಿದ್ರೂ ಅಷ್ಟೇ..! ಏನ್ ಪ್ರಯೋಜನ ಗುರು…! ನಮಗೆ ಅದೃಷ್ಟವಿಲ್ಲ..! ಅದಕ್ಕೆಲ್ಲಾ ಪಡ್ಕೊಂಡು ಬಂದಿರಬೇಕು..! ನನ್ನ ಹಣೇಲಿ ಬ್ರಹ್ಮ ಅದನ್ನೆಲ್ಲಾ ಬರೆದಿದ್ರೆ ನಾನೇಕೆ ಹೀಗಿರ್ತಿದ್ದೆ? ಅಂತ ಜೀವನದಲ್ಲಿ ಸಿಕ್ಕಾಪಟ್ಟೆ ಪ್ರಯತ್ನ ಪಟ್ಟು, ಕಷ್ಟಗಳನ್ನು ಎದುರಿಸಿ, ಸೋತವರಂತೆ ಕಥೆ ಹೊಡೀತಾರೆ..! ಆದರೆ, ಅವರಿಗೆ ಇನ್ನು 30 ವರ್ಷನೂ ಆಗಿರಲ್ಲ..!
ನೋಡಿ, ಅದೃಷ್ಟದಿಂದಲೇ ಎಲ್ಲವೂ ಸಿಗಲ್ಲ..! ಪರಿಶ್ರಮ ಬೇಕು..! ಬ್ರಹ್ಮ ಯಾರ್ ಹಣೇಲಿ ಏನನ್ನೂ ಬರೀಲಿಲ್ಲ..! ಈಗಲೇ ಕನ್ನಡೀಲಿ ನಿಮ್ ಮುಖ ನೋಡ್ಕೊಳ್ಳಿ..! ಹಣೆ ಖಾಲಿ ಇದೆ ಅಲ್ವಾ..? ಅಲ್ಲಿ ಏನ್ ಬೇಕಾದ್ರೂ ಬರೆದುಕೊಳ್ಳಬಹುದು..! ಅದು ನಮಗೆ ಬಿಟ್ಟಿದ್ದು..! ಆದ್ದರಿಂದ ಶ್ರಮಪಡದೇ, ಕಷ್ಟಪಟ್ಟು ಕೆಲಸ ಮಾಡದೇ, ಅಂದುಕೊಂಡಿದ್ದನ್ನು ಸಾಧಿಸಲು ಪ್ರಯತ್ನ ಪಡದೇ ಕಥೆ ಹೊಡ್ಕೊಂಡು ಇರಬೇಡಿ..!
ನಾನು ಹೆಚ್ಚಿಗೆ ಓದಿಲ್ಲ..! ನನ್ನತ್ರ ದುಡ್ಡಿಲ್ಲ ಅಂತ ನೆಪ ಹೇಳೋದು ಕೂಡ ಸರಿಯಲ್ಲ..! ಶಿಕ್ಷಣ ಬೇಕು ನಿಜ..! ಆದ್ರೆ, ಶಿಕ್ಷಣವೇ ಎಲ್ಲಾ ಅಲ್ಲ..! ಶಾಲೆಗೆ ಹೋಗಿ ಶಿಕ್ಷಣ ಪಡೆಯದೇ ಇರುವ ಎಷ್ಟೋ ಮಂದಿ ಸಾಧಕರು ನಮ್ಮ ನಡುವೆ ಇದ್ದಾರೆ..! ಹೆಚ್ಚಿನ ವಿದ್ಯಾಭ್ಯಾಸ ಪಡೆಯದೇ ಇದ್ರೂ ತಮ್ಮ ನೆಚ್ಚಿನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರೋ ಎಷ್ಟೋ ಮಂದಿಯ ಬಗ್ಗೆ ವಿದ್ಯಾರ್ಥಿಗಳು ತಮ್ಮ ಪಠ್ಯ ಪುಸ್ತಕದಲ್ಲಿ ಓದ್ತಿದ್ದಾರೆ..!
ಅದೇರೀತಿ ದುಡ್ಡು ಇಲ್ದೇ ಸಾಧನೆ ಮಾಡಿದವರೂ ನಮ್ಮೊಡನೆ ಇದ್ದಾರೆ..! ಅತ್ಯಂತ ಕಡುಬಡತನದಿಂದ ಬೆಳೆದು ಬಂದ ಅದೆಷ್ಟೋ ಮಂದಿ ಇವತ್ತು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ..! ಇವತ್ತು ಅವರತ್ರ ದುಡ್ಡು ಕೂಡ ಇದೆ..!
ತುಂಬಾ ಕಷ್ಟಪಟ್ರೂ, ಸಿಕ್ಕಾಪಟ್ಟೆ ಎಫರ್ಟ್ ಹಾಕಿದ್ರೂ ಅಂದುಕೊಂಡಿದ್ದು ಕೆಲವೊಮ್ಮೆ ನೆರವೇರಲ್ಲ..! ಎಷ್ಟೋಸಲ ಸಕ್ಸಸ್ ಅನ್ನೋದು ಹತ್ತಿರ ಬಂದು ಇನ್ನೇನು ಅದನ್ನು ತಬ್ಬಿಕೊಳ್ಳಬೇಕು ಅನ್ನುವಷ್ಟರಲ್ಲಿ ದೂರಾಗಿ ಬಿಡುತ್ತೆ..! ಆ ವೇಳೆ ತುಂಬಾ ನೋವಾಗುತ್ತೆ ನಿಜ..! ಹಾಗಂತ ಬೇಜಾರ್ ಮಾಡ್ಕೊಂಡು, ಇನ್ನು ಏನೂ ಮಾಡೋದ್ ಬೇಡ ಅಂತ ತೆಪ್ಪಗೆ ಕುಳಿತುಕೊಂಡ್ರೆ ಏನ್ ಪ್ರಯೋಜನ ಹೇಳಿ? ಸುಮ್ಮನೇ ಇರೋಕ್ಕಿಂತ ಏನಾದ್ರು ಒಂದು ಪ್ರಯತ್ನ ಪಡ್ತಿದ್ರೆ ಒಳ್ಳೇದಲ್ವಾ..? ರಾತ್ರಿ-ಬೆಳಗಾಗುವುರಲ್ಲಿ ಯಶಸ್ಸು ಸಿಗೋದೇ ಬೇಡ..! ನಿಧಾನಕ್ಕೆ ಸಿಗಲಿ.. ಸಿಕ್ಕ ಯಶಸ್ಸು ಚಿರವಾಗಿ ಜೊತೆಯಲಿರಲಿ.
ಅನಿಸಿದ್ದನ್ನ ಗೀಚಿದ್ದೀನಿ.. ನಿಮ್ಮ ಅಭಿಪ್ರಾಯ ತಿಳಿಸಿ.