ಇವರು ನೊಂದವರಿಗಾಗಿಯೇ ಜನ್ಮ ತಾಳಿದ್ದು ಅನ್ನಿಸುತ್ತೆ. ಶೋಷಿತರಿಗಾದ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ದೊರಕಿಸಿದ ಅಪ್ರತಿಮ ನ್ಯಾಯವಾದಿ. ಹೆಸರಿನಲ್ಲೆ ಕರುಣೆಯಿರೋ ಇವರು ನಿಜಕ್ಕೂ ಮಾದರಿ ಹೆಣ್ಣು. ‘ಓ ಹೆಣ್ಣೆ ನಿನಗ್ಯಾರು ಸಾಟಿ ಈ ಜಗದಲಿ’ ಎನ್ನುವ ಮಾತಿಗೆ ಪುಷ್ಠಿ ನೀಡುವಂತೆ ಇದ್ದಾರೆ ಈ ಸಾಧಕಿ. ಜಗದುದ್ದಗಲಕ್ಕೂ ತಮ್ಮ ಕೈಗಳನ್ನು ಚಾಚಿರುವ ಇವರು ಎಲ್ಲ ಕ್ಷೇತ್ರಗಳಲ್ಲೂ ಮುಂದು. ಮೇಲು-ಕೀಳು, ಲಿಂಗ ತಾರತಮ್ಯ ಎನ್ನುವ ಭವ ಬಂಧನಗಳನ್ನು ಬಿಡಿಸಿಕೊಂಡು ಇಂದು ತಮ್ಮ ಸಾಧನೆಗಳ ಮೂಲಕವೇ ಸಮಾಜಕ್ಕೆ ಸ್ಫೂರ್ತಿಯಾದ ನಾರಿಯೇ ಕರುಣಾ ನಂದಿ. ಎಲ್ಲಾ ಕ್ಷೇತ್ರಗಳಲ್ಲೂ ಶ್ರದ್ಧೆಯೆನ್ನುವ ಸಂಸ್ಕಾರವನ್ನ ರೂಢಿಸಿಕೊಂಡು ಸಾಧನೆಗಳಿಗೆ ಸ್ಫೂರ್ತಿ ನೀಡುತ್ತಿರೋ ಹಲವು ಮಹಿಳೆಯರಲ್ಲಿ ಒಬ್ಬರು ಕರುಣಾ ನಂದಿ. ಹುಟ್ಟು ಹೋರಾಟಗಾರ್ತಿ ಕರುಣಾ ಸಮಾಜದ ಅನೇಕ ಅನಾಚಾರಗಳಿಗೆ ಮುಕ್ತಿ ಹಾಡಿದ್ದಾರೆ. ಹಿಂದುಳಿದ ಪ್ರದೇಶಗಳಲ್ಲಿನ ಸಮುದಾಯಗಳಿಗೆ ಸುರಕ್ಷಿತ ನೀರನ್ನು ಒದಗಿಸಿಕೊಟ್ಟಿದ್ದಾರೆ.
ರಾಸಾಯನಿಕ ತುಂಬಿದ ಅಂತರ್ಜಾಲವನ್ನು ಕಡಿತಗೊಳಿಸುವುದು ಮತ್ತು ಅಲ್ಲಿನ ಜನರಿಗೆ ಉಚಿತ ಆರೋಗ್ಯ ಮತ್ತು ವೈದ್ಯಕೀಯ ನೆರವನ್ನು ಒದಗಿಸಿಕೊಡುವುದು ಸೇರಿದಂತೆ ಸದಾ ಸಮಾಜ ಕಲ್ಯಾಣಕ್ಕಾಗಿ ತಮ್ಮ ಜೀವನ ಮೀಸಲಿಟ್ಟಿದ್ದಾರೆ. ಕರುಣಾ ನಂದಿಯವ್ರು ನಿಜಕ್ಕೂ ಅಪ್ರತಿಮ ನ್ಯಾಯವಾದಿ. ಕಾನೂನಾತ್ಮಕವಾಗಿಯೇ ಹೋರಾಡಿ, ನೊಂದವರಿಗೆ ನ್ಯಾಯ ಒದಗಿಸಿಕೊಟ್ಟವರು. ಈ ಮೂಲಕ ಅವ್ರಲ್ಲಿ ಮತ್ತೊಂದು ಅಶಾಕಿರಣವನ್ನ ಮೂಡಿಸಿದವರು. ಭಾರತದಲ್ಲಿ ಇವ್ರು ಮಾಡಿದ ಮತ್ತೊಂದು ಮಹತ್ವದ ಕಾನೂನು ಹೋರಾಟವೆಂದ್ರೆ ಅದು ಅತ್ಯಾಚಾರ ವಿರೋಧಿ ಮಸೂದೆಯ ಜಾರಿ. ಅದು 2012ರ ಡಿಸೆಂಬರ್ 16 ರಾಷ್ಟ್ರ ರಾಜಧಾನಿಯಲ್ಲಿ ಅಂದು ನಡೆದ ಘಟನೆ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿತ್ತು. ನಿರ್ಭಯಾ ಮೇಲೆ ನಡೆದ ಗ್ಯಾಂಗ್ ರೇಪ್ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂಬುದನ್ನ ಸಾರಿ ಸಾರಿ ಹೇಳಿದಂತಿತ್ತು. ಅಂದು ನಡೆದ ಆ ಅಮಾನವೀಯ ಘಟನೆ ಇಡೀ ಮಾನವ ಕುಲವನ್ನೇ ತಲೆ ತಗ್ಗಿಸುವಂತೆ ಮಾಡಿತ್ತು. ಇಂತಹ ಭೀಕರ ಘಟನೆಗಳಿಗೆ ಕಡಿವಾಣ ಹಾಕಲು ಅನೇಕ ಚಿಂತಕರು ಅನೇಕ ರೀತಿಯಲ್ಲಿ ಚಿಂತಿಸತೊಡಗಿದ್ರು. ಕಾನೂನಾನತ್ಮಕವಾಗಿಯೂ ಹೋರಾಡಿ ಹೊಸ ಅತ್ಯಾಚಾರಿ ವಿರೋಧಿ ಮಸೂದೆಯೊಂದನ್ನ ಸಿದ್ಧಪಡಿಸಿದರು. ಈ ಮಸೂದೆ ರೂಪಿಸಿದ ಹಲವಾರು ಮಹನೀಯರಲ್ಲಿ ಕರುಣಾ ನಂದಿ ಕೂಡ ಒಬ್ಬರು. ಕರುಣಾ ನಂದಿ ಈ ಮಸೂದೆಯನ್ನು ರೂಪಿಸುವಲ್ಲಿ ಕಾನೂನುಬದ್ಧ ನಿಲುವನ್ನು ಬದಲಾಯಿಸುವ ಬಗ್ಗೆ ಮಹತ್ತರ ಪಾತ್ರ ವಹಿಸಿದ್ರು. ನಿರಂತರವಾಗಿ ಚಿಂತನ-ಮಂಥನ ನಡೆಸಿ ಮಸೂದೆ ಅಂಗೀಕಾರಕ್ಕೆ ಕಾರಣರಾದ್ರು. ಇದಷ್ಟೇ ಮಾತ್ರವಲ್ಲದೆ ಭಾರತದಲ್ಲಿ ಎಷ್ಟೋ ಸಮಸ್ಯೆ ನ್ಯಾಯಿಕ ರೀತಿಯಲ್ಲಿ ಬಗೆಹರಿಸಿದ್ದಾರೆ. ಕರುಣಾ 1984ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ನ್ಯಾಯ ದೊರಕಿಸುವುದರಲ್ಲಿ ಇವರದ್ದು ಮಹತ್ವದ ಪಾತ್ರ. ಅಷ್ಟೇ ಅಲ್ಲದೆ ಸಾಮಾಜಿಕವಾಗಿ ತುಳಿತಕ್ಕೊಳಗಾದ ಎಷ್ಟೋ ಜನರಿಗೆ ನ್ಯಾಯ ಕೊಡಿಸಿದವರು. ಇವ್ರು ಯಾವತ್ತೂ ಭಾರತದಲ್ಲಿ ನಡೆಯುವ ಲಿಂಗ ತಾರತಮ್ಯವನ್ನ ಒಪ್ಪಿದವರಲ್ಲ. ಅದನ್ನ ತೀವ್ರವಾಗಿ ವಿರೋಧಿಸಿದರು. ಸಮಾಜದಲ್ಲಿ ಮಹಿಳೆಯರ ಸ್ಥಾನವನ್ನ ಮತ್ತಷ್ಟು ಉತ್ತಮೀಕರಿಸಿದರು. ಕರುಣಾ ನಂದಿಯವ್ರು ಒಬ್ಬ ಭಾರತೀಯ ಸಾಂವಿಧಾನಿಕ ವಾಣಿಜ್ಯ ಮತ್ತು ಮಾಧ್ಯಮ ವಕೀಲೆಯಷ್ಟೇ ಅಲ್ಲ. ಸ್ತ್ರೀ ಸಮಾನತಾವಾದಿಯೂ ಹೌದು. ಯಾವುದೇ ಪ್ರತಿಫಲವನ್ನ ನಿರೀಕ್ಷಿಸದೇ ತಮ್ಮ ಕರ್ತವ್ಯವನ್ನ ಶ್ರದ್ಧೆಯಿಂದ ನಿರ್ವಹಿಸುತ್ತಿರುವ ನಂದಿಯವ್ರಿಗೆ ಸಂಘ-ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ-ಪುರಸ್ಕಾರಗಳು ದೊರಕಿವೆ. ಸಮಾಜಮುಖಿ ಕಾರ್ಯಗಳ ಮೂಲಕ ಹೆಸರುವಾಸಿಯಾದ ಕರುಣಾನಂದಿಯವ್ರು ಯುವ ಜನತೆಗೆ ಸ್ಫೂರ್ತಿಯಾಗಿದ್ದಾರೆ. ಒಟ್ಟಾರೆಯಾಗಿ ತಮ್ಮ ನಿಸ್ವಾರ್ಥ ಸೇವೆ ಮಾಡ್ತಿರೋ ಕರುಣಾ ನಂದಿ ಭಾರತೀಯ ಹೆಣ್ಣು ಮಕ್ಕಳಿಗೆ ನೀಡಿದ ಬಹುದೊಡ್ಡ ಸಾಧನೆಯೇ ಸರಿ.