ಚಾಮರಾಜನಗರ ಜಿಲ್ಲೆಯ ಗಾಜನೂರು (Gajanuru, Chamarajanagara) ಅಂದ್ರೆ ಸಾಕು ನೆನಪಿಗೆ ಬರೋದೊ ಮೇರು ನಟ ಡಾ.ರಾಜಕುಮಾರ್. (Dr Rajkumar)ಡಾ.ರಾಜ್ ಅವರ ತಂದೆ ಪುಟ್ಟಸ್ವಾಮಯ್ಯ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸಿಂಗನಲ್ಲೂರಿನವರಾದರೂ ಅವರು ಬಾಳಿ ಬದುಕಿದ್ದು ಪತ್ನಿ ಲಕ್ಷ್ಮಮ್ಮ ಅವರ ತವರೂರು ಗಾಜನೂರಿನಲ್ಲಿ.
ಡಾ.ರಾಜ್ ಕುಮಾರ್ ಅವರು ಹುಟ್ಟಿದ್ದು ಬಾಲ್ಯ ಕಳೆದಿದ್ದು ಗಾಜನೂರಿನಲ್ಲಿ. ಹಾಗಾಗಿಯೇ ಗಾಜನೂರು ಎಂದರೆ ಅವರಿಗೆ ಸ್ವರ್ಗ. ಬೆಂಗಳೂರಿನಿಂದ (Bengaluru) ಗಾಜನೂರಿಗೆ ಹೋಗಬೇಕಾದರೆ ಚಾಮರಾಜನಗರದ ಮೂಲಕವೇ ಹಾದು ಹೋಗಬೇಕು. ಹಾಗಾಗಿಯೇ ಅವರು ಚಾಮರಾಜನಗರವನ್ನು ಸ್ವರ್ಗದ ಹೆಬ್ಬಾಗಿಲು ಎನ್ನುತ್ತಿದ್ದರು.
ರಾಜ್ಯ ಪುನರ್ ವಿಂಗಡಣೆ ಸಂದರ್ಭದಲ್ಲಿಅಪ್ಪಟ ಕನ್ನಡರಿಗೇ ಇರುವ ಗಾಜನೂರು ತಮಿಳುನಾಡಿನ ತಾಳವಾಡಿ ಫಿರ್ಕಾಕ್ಕೆ ಸೇರಿ ಹೋಯ್ತು. ಗಾಜನೂರಿನ ಊರೊಳಗೆ ಡಾ.ರಾಜಕುಮಾರ್ ಜನಿಸಿದ ಪುಟ್ಟ ಹೆಂಚಿನ ಮನೆ ಇದೆ. ಈ ಮನೆಯೆಂದರೆ ಅವರಿಗೆ ಬಹಳವೇ ಅಚ್ಚುಮೆಚ್ಚು ಸ್ಥಳವಾಗಿತ್ತು.
ರಾಜಕುಮಾರ್ ತಮ್ಮ ಸ್ವಗ್ರಾಮಕ್ಕೆ ಬಂದಾಗಲೆಲ್ಲ ಮತ್ತೊಂದು ತೊಟ್ಟಿ ಮನೆ ಇದ್ದರೂ ಸಹ ಈ ಪುಟ್ಟ ಮನೆಯಲ್ಲೇ ಹೆಚ್ಚಾಗಿ ಕಾಲ ಕಳೆಯುತ್ತಿದ್ದರು. ತಮ್ಮ ತಂದೆ, ತಾಯಿ ಹಾಗೂ ಈ ಮನೆಯಲ್ಲಿ ತಮ್ಮ ಬಾಲ್ಯದ ನೆನಪು ಮಾಡಿಕೊಳ್ಳುತ್ತಾ ಕಳೆದು ಹೋಗುತ್ತಿದ್ದರು.
ರಾಜ್ ಕುಟುಂಬದ ದೂರದ ಸಂಬಂಧಿ ವಾಸ
ಡಾ.ರಾಜ್ ಕುಮಾರ್ ಅವರು ನಿಧನದರಾದ ನಂತರ ಈ ಮನೆಯನ್ನು ಅವರ ಕುಟುಂಬ ವರ್ಗದವರಿಗೆ ಸ್ಮಾರಕವನ್ನಾಗಿಸುವ ಕನಸಿತ್ತು. ಆದರೆ ಕಾರಣಾಂತರ ಗಳಿಂದ ಅದು ಸಾಧ್ಯವಾಗಿರಲಿಲ್ಲ. ಡಾ.ರಾಜ್ ದೂರದ ಸಂಬಂಧಿಯೊಬ್ಬರು ಈ ಮನೆಯಲ್ಲಿ ವಾಸಿಸುತ್ತಿದ್ದರು.
ಮನೆ ದುರಸ್ತಿ ಮಾಡಲು ಮುಂದಾಗಿದ್ರು ಅಪ್ಪು
ಸುಮಾರು 250 ವರ್ಷಗಳಷ್ಟು ಹಳೆಯದಾದ ಈ ಮನೆ ಇತ್ತೀಚೆಗೆ ಶಿಥಿಲಗೊಂಡಿತ್ತು. ಇತ್ತೀಚೆಗೆ ಬಿದ್ದ ಮಳೆಯಿಂದ ಕುಸಿಯುವ ಹಂತ ತಲುಪಿತ್ತು. ಪುನೀತ್ ರಾಜ್ ಕುಮಾರ್ ಮೂರುವರೆ ತಿಂಗಳ ಹಿಂದಷ್ಟೆ ಈ ಮನೆಗೆ ಭೇಟಿ ನೀಡಿದ್ದರು. ತಮ್ಮ ತಂದೆಯವರ ಅಚ್ಚುಮೆಚ್ಚಿನ ಸ್ಥಳವಾಗಿದ್ದ ಈ ಮನೆಯನ್ನು ದುರಸ್ತಿ ಮಾಡಿಸಲು ಆಸೆಪಟ್ಟಿದ್ದರು . ಗಾಜನೂರಿಗೆ ಮತ್ತೆ ಭೇಟಿ ಕೊಟ್ಟು ದುರಸ್ತಿ ಮಾಡಿಸುವುದಾಗಿಯೂ ಅವರು ಹೇಳಿ ಹೋಗಿದ್ದರು. ಆದರೆ ಅಕಾಲಿಕ ನಿಧನದಿಂದ ಅವರ ಆಸೆ ಕೈಗೂಡಲೇ ಇಲ್ಲ, ಅವರ ಕನಸು ಕನಸಾಗಿಯೇ ಉಳಿದು ಹೋಗಿತ್ತು.
ಆದರೆ ಇದೀಗ ಅಪ್ಪು ಆಸೆ ಈಡೇರಿಸಲು ಡಾ.ರಾಜ್ ಕುಟುಂಬ ನಿರ್ಧರಿಸಿ ಡಾ.ರಾಜ್ ಜನಿಸಿದ ಈ ಮನೆಗೆ ಕಾಯಕಲ್ಪ ನೀಡಲು ಮುಂದಾಗಿದೆ. ಈ ಮನೆಯನ್ನು ಮೂಲ ಹೇಗಿತ್ತು ಅದೇ ರೀತಿಯಲ್ಲೇ ದುರಸ್ತಿಪಡಿಸುವ ಕಾರ್ಯ ಕೈಗಿತ್ತಿಕೊಂಡಿದೆ.
ಯಥಾಸ್ಥಿತಿಯಲ್ಲಿ ಮನೆ ಉಳಿಸಿಕೊಳ್ಳಲು ನಿರ್ಧಾರ
ಆರು ತಲೆ ಮಾರುಗಳಿಂದ ಇರುವ ಈ ಮನೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿ ಮನೆಯ ದುರಸ್ತಿ ಕಾರ್ಯ ಮಾಡಿಸುತ್ತಿದ್ದೇವೆ ಎಂದು ನ್ಯೂಸ್ 18 ಗೆ ಮಾಹಿತಿ ನೀಡಿದ ಡಾ.ರಾಜ್ ಸಹೋದರಿಯ ಮಗ ಗೋಪಾಲ್ ಅವರು, ಮನೆಯ ಹೆಂಚುಗಳು, ಮರದ ತೊಲೆಗಳು, ಬಿದಿರಿನ ಗಳುಗಳನ್ನು ಬಳಸಿಕೊಂಡು ಹಿಂದೆ ಯಾವ ಆಕಾರದಲ್ಲಿತ್ತೋ ಅದೇ ಆಕಾರದಲ್ಲಿ ಮನೆಯನ್ನು ನವೀಕರಿಸಿ ಇಲ್ಲಿ ಹಿಂದೆ ವಾಸ ಮಾಡುತ್ತಿದ್ದ ನಮ್ಮ ತಾತ, ನಮ್ಮ ಮಾವ ಡಾ.ರಾಜಕುಮಾರ್, ಪುನೀತ್ ರಾಜಕುಮಾರ್ ಅವರ ಫೋಟುಗಳನ್ನು ಇಟ್ಟು ಮ್ಯೂಸಿಯಂ ಮಾದರಿಯಲ್ಲಿ ಸ್ಮಾರಕ ಮಾಡಲಾಗುವುದು.
ದುರಸ್ತಿ ನಂತರ ಡಾ.ರಾಜ್ ಕುಮಾರ್ ಅಭಿಮಾನಿಗಳು ಹಾಗೂ ಪುನೀತ್ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಮನೆ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಇದರೊಂದಿಗೆ ಅಪ್ಪು ಅವರ ಆಸೆಯನ್ನು ಈಡೇರಿಸುವ ಮೂಲಕ ಅವರ ನೆನಪನ್ನು ಶಾಶ್ವತವಾಗಿ ಉಳಿಸಲು ಡಾ.ರಾಜ್ ಕುಟುಂಬ ಮುಂದಾಗಿದೆ