ಕೃಷ್ಣನ್ ಲವ್ ಸ್ಟೋರಿ ಖ್ಯಾತಿಯ ನಟ ಅಜಯ್ ರಾವ್ ಈಗ ಪೊಲೀಸ್ ಅಧಿಕಾರಿಯಾಗಿದ್ದಾರೆ. ನಟನೆ ಬಿಟ್ಟು ಅಜಯ್ ಪೊಲೀಸ್ ಇಲಾಖೆಗೆ ಸೇರಿದ್ರಾ ಅಂತ ಕೇಳ್ತಿದ್ದೀರಾ? ಇಲ್ಲ ಸಿನಿಮಾದಲ್ಲೇ ಅವರು ಪೊಲೀಸ್ ಅಧಿಕಾರಿ ಆಗಿರುವುದು.
ಕಾಲೇಜು ಹುಡುಗ, ಲವ್ವರ್ ಬಾಯ್ ಆಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಅಜಯ್ ರಾವ್, ಹೊಸ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಅಜಯ್ ಅವರನ್ನು ಪೊಲೀಸ್ ಗೆಟಪ್ನಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ.
ಜಿಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಒಂದು ಕ್ರೈಮ್ ಥ್ರಿಲ್ಲರ್ ಎಂದು ತಿಳಿದುಬಂದಿದೆ. ಎಸ್ ರಾಜವರ್ಧನ್ ಪಾಲಿಗಿದು ಮೊದಲ ಸಿನಿಮಾ. ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಅವರೊಡನೆ “ರಾಜಾಹುಲಿ”, ” ರುದ್ರತಾಂಡವ” ಚಿತ್ರಗಳಲ್ಲಿ ಕೆಲಸ ಮಾಡಿದ್ದರು.
ಈಗ ಪ್ರಜ್ವಲ್ ದೇವರಾಜ್ ಅಭಿನಯದ “ಜಂಟಲ್ ಮ್ಯಾನ್” ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ರಾಜವರ್ಧನ್ ಕೆಲಸ ಮಾಡುತ್ತಿದ್ದು, ತಾವೇ ಸ್ವತಂತ್ರ ಡೈರೆಕ್ಟರ್ ಆಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಬಳಿಕ ವರಮಹಾಲಕ್ಷ್ಮಿ ಹಬ್ಬದಂದು (ಆ. 9) ಚಿತ್ರದ ಶೂಟಿಂಗ್ ಪ್ರಾರಂಭಿಸಲು ಪ್ಲಾನ್ ಮಾಡಿಕೊಂಡಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ಮೂವರು ನಾಯಕಿಯರಿರಲಿದ್ದಾರೆ. ಇದಕ್ಕಾಗಿ ಸ್ಟಾರ್ ನಟಿಯರ ಆಯ್ಕೆಯಲ್ಲಿ ಚಿತ್ರತಂಡ ತೊಡಗಿದೆ ಎಂದು ತಿಳಿದುಬಂದಿದೆ.