ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ, ವಾಣಿಜ್ಯ ಹಾಗೂ ಕಲಾತ್ಮಕ ಎರಡೂ ಮಾದರಿಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಆದರೆ ಇತ್ತೀಚೆಗೆ ಪ್ರಿಯಾಮಣಿಗೆ ನಾಯಕ ನಟಿ ಪಾತ್ರಗಳು ಕಡಿಮೆ ಆಗಿವೆ. ನಿಧಾನಕ್ಕೆ ಅವರು ಪೋಷಕ ಪಾತ್ರಗಳತ್ತ ಹೊರಳಿಕೊಳ್ಳುತ್ತಿದ್ದಾರೆ.
ದಕ್ಷಿಣ ಭಾರತದ ದೊಡ್ಡ ಸ್ಟಾರ್ ನಟರೊಟ್ಟಿಗೆ ನಟಿಸಿರುವ ಪ್ರಿಯಾಮಣಿ ಬಾಲಿವುಡ್‌ನ ಕೆಲ ನಟರೊಂದಿಗೂ ತೆರೆ ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾದವರು ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್.
‘ಚೆನ್ನೈ ಎಕ್ಸ್‌ಪ್ರೆಸ್’ ಸಿನಿಮಾದ ಹಾಡೊಂದರಲ್ಲಿ ಶಾರುಖ್ ಖಾನ್ ಹಾಗೂ ಪ್ರಿಯಾಮಣಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ಹಾಡು ಸೂಪರ್ ಹಿಟ್ ಆಗಿತ್ತು. ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಶಾರುಖ್ ಖಾನ್ ತಮಗೆ 300 ರು. ಹಣ ಕೊಟ್ಟಿದ್ದನ್ನು ಪ್ರಿಯಾಮಣಿ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
”ಬಿಡುವಿನ ಸಮಯದಲ್ಲಿ ನಾವುಗಳು ‘ಕೌನ್ ಬನೇಗ ಕರೋಡ್‌ಪತಿ’ ಆಡುತ್ತಿದ್ದೆವು. ಆ ಆಟದಲ್ಲಿ ನಾನು ಕೆಲವು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದೆ. ಹಾಗಾಗಿ ನನಗೆ 300 ರು.ಗಳನ್ನು ಶಾರುಖ್ ಖಾನ್ ಕೊಟ್ಟಿದ್ದರು. ಆ 300 ರು. ಈಗಲೂ ನನ್ನ ಬಳಿ ಹಾಗೆಯೇ ಇದೆ” ಎಂದಿದ್ದಾರೆ ಪ್ರಿಯಾಮಣಿ.