ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?

Date:

ಹೇ, ಬೇಡ ಬೇರೆ ಯಾರಿದ್ದೋ ಮಾತು ಕಟ್ಟಿಕೊಂಡು ಅವನನ್ನು ದೂರ ಮಾಡ್ಬೇಡ..! ಅಪರಂಜಿ ಕಣೇ ಅವನು ಎಂದು ಸುಷ್ಮಾ ಸಾರಿ ಸಾರಿ ಬಡ್ಕೊಂಡ್ರು ಅವತ್ತು ಪ್ರಾರ್ಥನಾ ಕೇಳೋ ಸ್ಥಿತಿಯಲ್ಲಿರ್ಲಿಲ್ಲ..! ನಿನಗೆ ಆ ಚೀಟರ್ ಇಷ್ಟ ಆದ್ರೆ ನೀನೇ ಕಟ್ಕೊ? ನನಗೆ ಹೇಳ್ಬೇಡ ಓಕೆ? ಎಂದು ಪ್ರಾರ್ಥನ ಸುಷ್ಮಾಳ ಮೇಲೆ ರೇಗಾಡಿ ಅವಳಿಗೂ ಬೇಜಾರು ಮಾಡಿದ್ಲು! ಇಲ್ಲ, ಗೌತಮ್ ನಿಜಕ್ಕೂ ನೀನು ಅಂದುಕೊಂಡಂತ ಕೆಟ್ಟ ಹುಡುಗ ಅಲ್ಲ ಕಣೇ..! ಅವನು ಈಗ ನಿನ್ನ ನೆನಪಲ್ಲಿ ಊಟ, ತಿಂಡಿ ಬಿಟ್ಟು ನೋವು ತಿನ್ತಾ ಇದ್ದಾನೆ ಕಣೇ ಎಂದು ಸುಷ್ಮಾ ಅರ್ಥಮಾಡಿಸಿದ್ರೂ ಪ್ರಾರ್ಥನ ಬದಲಾಗಲಿಲ್ಲ..!

ಅಯ್ಯೋ, ಅವನ ಬಗ್ಗೆ ನಿನಗೆ ಅಷ್ಟು ಕನಿಕರ ಇದ್ರೆ ನೀನೇ ಹೋಗಿ ಊಟ ಮಾಡ್ಸೆ ಎಂದು ಕೊಂಕು ನುಡಿಯೋಕೆ ಶುರು ಮಾಡಿದ್ಲು ಪ್ರಾರ್ಥನ! ಸಹಿಸಿಕೊಂಡು ಸಾಕಾಗಿದ್ದ ಸುಷ್ಮಾ ಸಿಟ್ಟಾದಳು, ಸಿಟ್ಟಿನಲ್ಲಿ ಪ್ರೀತಿಯಿಂದ ಗದರಿದಳು..!ಹೇ, ನೋಡು ಪ್ರಾರ್ಥನ ಗೌತಮ್ ನೀನು ಪ್ರೀತಿಸಿದ ಹುಡುಗ..! ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ. ಪಾಪ ತಪ್ಪು ಮಾಡದೇ ಇದ್ರೂ ಅವನಿಗೆ ಚಿತ್ರಹಿಂಸೆ ನೀಡ್ತಾ ಇದ್ದಿಯಲ್ಲೇ? ತಿಳ್ಕೊ, ನೀನು ನನ್ನ ಬೆಸ್ಟ್ ಫ್ರೆಂಡ್, ಅವನು ಸೋದರನಂತೆ ಅದಕ್ಕಾಗಿ ನಿನಗೆ ಬುದ್ಧಿ ಹೇಳ್ತಾ ಇದ್ದೀನಷ್ಟೇ..! ಏನಾದ್ರೂ ಮಾಡ್ಕೊ, ಅವನು ಒಳ್ಳೆ ಹುಡುಗ ಅವನನ್ನು ಕಟ್ಕೊಳ್ಳಕ್ಕೆ ಪುಣ್ಯ ಮಾಡಿರ್ಬೇಕು. ಹ್ಞೂಂ.. ಏನಂದಿ ಹೇಳು? ನಾನು ಹೋಗಿ ಊಟ ಮಾಡಿಸ್ಬೇಕ? ಮಾಡಿಸ್ತೀನಿ..! ಒಬ್ಬ ಒಳ್ಳೆ ಫ್ರೆಂಡ್ ಆಗಿ, ಒಂದೊಳ್ಳೆ ತಂಗಿನೋ ಅಕ್ಕನೋ ಆಗಿ ಅವನಿಗೆ ಊಟ ಮಾಡಿಸ್ತೀನಿ..! ನಿನ್ನಂಥಾ ಹಠಮಾರಿ, ಕಲ್ಲು ಹೃದಯದ ಫ್ರೆಂಡ್‍ಗಿಂತ ಅವನಿಗೆ ಸಮಾಧಾನ ಮಾಡೋದೇ ಸರಿ ಎಂದು ಪ್ರಾರ್ಥನಗೂ ಅವಳ ಫ್ರೆಂಡ್‍ಶಿಪ್‍ಗೂ ಗುಡ್‍ಬೈ ಹೇಳಿ ಹೊರಟಳು ಸುಷ್ಮಾ!

ಇತ್ತ ಬಂದು ಗೌತಮ್‍ಗೆ ಸಮಾಧಾನ ಮಾಡಿದ್ದೂ ಆಯ್ತು, ಅವನು ಕಾಟಚಾರಕ್ಕೆ ಊಟ ಮಾಡಿದ ಬಿಟ್ಟರೆ ಪ್ರಾರ್ಥನಳ ನೆನಪಿನಿಂದ ಆಚೆ ಬರಲಿಲ್ಲ..! ದಿನಗಳು ಕಳೆದವು, ಆರೇಳು ತಿಂಗಳೇ ಮುಗಿಯಿತು..! ಒಂದು ದಿನ ಪ್ರಾರ್ಥನ ಸುಷ್ಮಾಗೆ ಫೋನ್ ಮಾಡಿ ಮನೆಗೆ ಬರ ಹೇಳಿದ್ಲು. ಪ್ರಾರ್ಥನಳ ದನಿಯಲ್ಲಿದ್ದ ನಡುಕ ಕೇಳಿ ಆತುರದಲ್ಲೇ ಮನೆಗೆ ಹೋದ್ಲು! ಅವತ್ತು, ಪ್ರಾರ್ಥನ ಹಾಸಿಗೆ ಹಿಡಿದಿದ್ಲು..! ಕರೆ ಮಾಡಿದ್ದು ಪ್ರಾರ್ಥನ ಆಗಿರಲಿಲ್ಲ..! ಅವಳ ತಂಗಿ ಸುಮನ!
ಹಾಸಿಗೆ ಹಿಡಿದಿದ್ದ ಗೆಳತಿಯನ್ನು ನೋಡಿ ಸುಷ್ಮಾಗೆ ಅಳು ತಡೆಯಲಾಗಲಿಲ್ಲ..! ತಬ್ಬಿಕೊಂಡು ಜೋರಾಗಿ ಅತ್ತಳು..! ಪ್ರಾರ್ಥನ ಸಂಕಟದಲ್ಲೇ ನಗುತ್ತಾ.. ಅಳಬೇಡ ಸುಷ್ಮಾ..! ಇವತ್ತು ಅರ್ಥ ಆಯ್ತಾ? ನಾನೇಕೆ ಗೌತಮ್‍ನನ್ನು ದೂರ ಇಟ್ಟೆ ಎಂದು..! ನನಗೆ ಮಾತಾಡಲು ಕಷ್ಟ ಆಗ್ತಾ ಇದೆ, ಆ…. ಅಲ್ಲಿ ನೋಡು, ನನ್ನ ಲ್ಯಾಪ್ ಬ್ಯಾಗ್ ಇದೆ ತೆಗಿ..! ಸುಷ್ಮಾ ಬ್ಯಾಗ್ ತೆಗೆದಳು. ಅದರಲ್ಲಿ ಒಂದು ಡೈರಿಯಿದೆ. ಅದರಲ್ಲಿ ಎರಡು ಎನ್‍ವಾಲಪ್ ಕವರ್ ಇದೆ ತೆಗೆದುಕೊ? ನಿನ್ನ ಹೆಸರಲ್ಲಿ ಇರೋದನ್ನು ಓಪನ್ ಮಾಡಿ ಅದರಲ್ಲಿನ ಪತ್ರವನ್ನು ಓದು..! ಗೌತಮ್ ಹೆಸರಲ್ಲಿರೋ ಕಾಗದ ಅವನಿಗೆ ಕೊಡು ಎಂದು ಕೈ ಮಗಿದಳು..ಕಣ್ಣಲ್ಲಿ ನೀರು ಜಿನುಗುತ್ತಿತ್ತು..!


ಕಷ್ಟದಲ್ಲೇ ಪತ್ರ ಬಿಡಿಸಿದ ಸುಷ್ಮಾ…., ಪತ್ರವನ್ನು ಓದ್ತಾಳೆ.
ಅಕ್ಕರೆಯ ಗೆಳತಿ ಸುಶು.. ಅಲ್ವೇ ಪೆದ್ದುಗುಂಡಿ ಗೌತು ನಿನಗೆ ಅಂತಲ್ಲ..ಎಲ್ಲರಿಗೂ ಇಷ್ಟ ಆಗ್ತಾನೆ..! ಇನ್ನು ಅವನನ್ನು ಪ್ರೀತಿಸಿದ ಹುಡುಗಿ ನಾನು. ನಾನವನ್ನ ಅದೆಷ್ಟು ಇಷ್ಟ ಪಡಬೇಡ ಹೇಳು..! ಹೇ, ನನ್ನ ಆರೋಗ್ಯ ಕೆಟ್ಟು ಇಷ್ಟೊಂದು ಬೇಗ ಸತ್ತು ಹೋಗ್ತೀನಿ ಅಂತ ಮೊದಲೇ ಗೊತ್ತಿದ್ದಿದ್ರೆ ನಾನು ಅವನ ಸ್ನೇಹ, ಪ್ರೀತಿ ಎಡರನ್ನೂ ಬಯಸ್ತಾ ಇರ್ಲಿಲ್ಲ..! ಅವನ ಕಾಡಿ ಬೇಡಿ ಪ್ರೀತ್ಸೆ ಪ್ರೀತ್ಸೆ ಅಂತ ಚಪ್ಪಲಿ ಸವೆಸಿದ್ರೂ ಅವನಿಗೆ ಕ್ಯಾರೇ ಎನ್ನುತ್ತಿರಲಿಲ್ಲ..! ಆದರೆ, ನನ್ನೊಳಗೆ ಕೂತು ಯಮ ನನ್ನ ಆತ್ಮವನ್ನು ಬಲವಂತದಿಂದ ಕಿತ್ತೊಯ್ಯುವ ಪ್ರಯತ್ನ ಮಾಡ್ತಾ ಇದ್ದಾನೆ ಎಂದು ತಿಳಿದಿದ್ದೇ ಈ 7 ತಿಂಗಳ ಹಿಂದಷ್ಟೇ..! ಅದು ತಿಳಿದ ಮೇಲೆ ಅವನಿಗೆ ಲವ್ ಬೇಡ, ಫ್ರೆಂಡ್ ಆಗಿರ್ತೀನಿ..! ಪ್ರೀತಿ ಶಾಶ್ವತ ಅಲ್ಲ ಅಂತೆಲ್ಲಾ ಪರೋಕ್ಷವಾಗಿ ದೂರಾಗುವ ಸೂಚನೆ ಕೊಟ್ಟೆ..! ಮನಸ್ಸೆಲ್ಲಾ ನನ್ನ, ನನ್ನ ಪ್ರೀತಿಯನ್ನೇ ತುಂಬಿ ಕೊಂಡಿದ್ದ ನನ್ನ ಗೌತು, ನನ್ನ ಮಾತನ್ನು ಅರ್ಥಮಾಡಿಕೊಳ್ಳಲಿಲ್ಲ..! ನಾನು ಈ ಲೋಕವನ್ನೇ ಬಿಟ್ಟು ಹೊರ ಹೋದ ಕೂಡಲೇ ಅವನಿಗೆ ಒಮ್ಮೆಲೆ ದೊಡ್ಡ ಶಾಕ್ ನೀಡಿದಂತಾಗುತ್ತೆ ಎಂದು ನಾನೇ ದೂರ ಇಟ್ಟೆ..! ನಾಲ್ಕು ಜನ ಹುಡುಗಿಯರೊಡನೆ ಮಾತನಾಡಿದ್ದನ್ನೇ ದೊಡ್ಡ ರಾದ್ದಾಂತ ಮಾಡಿ ಅವನನ್ನು ದ್ವೇಷಿಸಿದಂತೆ ನಾಟಕ ಮಾಡಿದೆ..! ನಿನಗಾದರೂ ಎಲ್ಲಾ ವಿಷಯವನ್ನು ಹೇಳೋಣ ಎಂದು ಕೊಂಡೆ, ಬಟ್ ಅದೂ ಸಹ ಇಷ್ಟ ಆಗಿಲ್ಲ. ಕಾರಣ, ನೀ ನನ್ನ ಬೆಸ್ಟ್ ಫ್ರೆಂಡ್..! ನಿನ್ನ ಮನಸ್ಸಿಗಾಗಲೀ, ಮನೆಯವರ ಮನಸ್ಸಿಗಾಗಲೀ ನೋವು ಕೊಡುವುದು ಇಷ್ಟವಿರಲಿಲ್ಲ ಎಂದು ಆ ಪತ್ರದಲ್ಲಿ ತಿಳಿಸಿದ್ದಳು. ಪತ್ರ ಓದಿದ ಸುಷ್ಮಾಳ ದುಃಖ ಇಮ್ಮಡಿಯಾಯ್ತು. ಪ್ರಾರ್ಥನ ಹೇಳಿದ್ಲು, ಸುಶು..ನಾನು ಸತ್ತ ಮೇಲೆಯೇ ಈ ಪತ್ರ ನಿಮಗೆ ತಲುಪಬೇಕೆಂದು ಕೊಂಡಿದ್ದೆ..! ಸಾವಿನ ದಿನಗಳು ಹತ್ತಿರವಾಗುತ್ತಿದ್ದಂತೆ ಈ ಪತ್ರ ಮತ್ತೆ ನಿಮಗೆ ಸಿಗದೇ ಇದ್ರೆ ಕೊನೆಗೂ ನಾನು ಹೇಳದೇ ಹೋದೆನಲ್ಲಾ? ಎಂದು ನೀವು ಬೇಜಾರು ಮಾಡಿಕೊಳ್ಳ ಬಾರದೆಂದು ಇವತ್ತೇಕೋ ನಿನ್ನ ಕರೆಸಿದೆ..!
ತಾನು ಪ್ರಾರ್ಥನಾಳನ್ನು ಕೂರಿಸಿ ಸಮಾಧಾನದಿಂದ ಅವತ್ತೇ ಎಲ್ಲಾ ವಿಷಯವನ್ನು ಕೇಳಿದ್ರೆ ಹೇಳ್ತಾ ಇದ್ದಳೇನೋ? ಛೇ.. ಎಂದು ಪಶ್ಚಾತಾಪ ಪಟ್ಟಳು..! ನಡೆದ ವಿಚಾರವನ್ನೆಲ್ಲಾ ಗೌತಮ್‍ಗೆ ಹೇಳಿ ಪ್ರಾರ್ಥನಳ ಪತ್ರವನ್ನು ಕೈಗಿತ್ತು ಬಂದ ದಾರಿಯಲ್ಲೇ ಪ್ರಾರ್ಥನಳ ಮನೆ ದಾರಿ ಹಿಡಿದಳು..!


ಪ್ರಾರ್ಥನ ಗೌತಮ್‍ಗೆ ಬರೆದ ಪತ್ರದಲ್ಲಿ ಇದ್ದದ್ದು ಒಂದೇ ಒಂದು ಶಾಲು, ಎರಡೇ ಎರಡು ವಾಕ್ಯ..! ಗೌತು ನಾನು ನಿನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ.ವ ನಿನ್ನೊಡನೆ ಬದುಕುವ ಅದೃಷ್ಟ ನನಗಿಲ್ಲ, ಕ್ಷಮಿಸು..!
ಸುಷ್ಮಾ ವಿವರಿಸಿದ ಪ್ರಾರ್ಥನಾಳ ಸ್ಥಿತಿ.. ಅವಳು ಬರೆದಿರುವ ಎರಡು ಸಾಲುಗಳು ಗೌತಮ್‍ನ ಹೃದಯ ಛಿದ್ರ ಮಾಡಿದ್ದವು..! ದುಃಖದಲ್ಲೇ ಪ್ರಾರ್ಥನಳ ಮನೆಗೆ ಹೋದ. ಪ್ರಾರ್ಥನಳ ಕೈ ಹಿಡಿದು ಅತ್ತ. ಪ್ರಾರ್ಥನ ತಲೆ ಸವರತ್ತ ನಿಧಾನಕ್ಕೆ ಎದ್ದು ಗೌತಮ್‍ನ ಭುಜಕ್ಕೆ ಒರಗಿದಳು..! ಹೇ, ನಿನ್ನ ಚೆನ್ನಾಗಿ ನೋಡಿಕೊಳ್ತೀನಿ ಕೊನೆತನಕ ಎಂದು ಹೇಳಿದ ಗೌತಮ್. ಅಷ್ಟರಲ್ಲೇ, ನಗುತ್ತಾ ಭುಜವನ್ನು ಗಟ್ಟಿಯಾಗಿ ತಬ್ಬಿದ್ದ ಪ್ರಾರ್ಥನ ಕೊನೆಯುಸಿರೆಳೆದಿದ್ದಳು..!
ಪ್ರಾರ್ಥನಾ ಮತ್ತು ಗೌತಮ್ ಒಬ್ಬರನ್ನೊಬ್ಬರು ತುಂಬಾನೇ ಪ್ರೀತಿಸ್ತಾ ಇದ್ರು. ಪ್ರಾರ್ಥನಗೆ ಬ್ರೈನ್‍ಟ್ಯೂಮರ್ ಬಂದು ವಕ್ಕರಿಸಿಕೊಳ್ತು..! ಸಾವು ಸನ್ನಿಹಿತ ಎಂದು ಗೊತ್ತಾದಾಗ ಗೌತಮ್‍ನನ್ನು ದೂರವಿಟ್ಟಳು. ಕೊನೆಗೂ ಪ್ರೀತಿಸಿದ ಹುಡುಗನ ಭುಜದಲ್ಲೇ ಒರಗಿ ಪ್ರಾಣಬಿಟ್ಟಳು. ದುರಂತ ಎಂದರೆ ಪ್ರಾರ್ಥನ ಮತ್ತವಳ ಸೋದರಿ ಸುಮನಾ ಅನಾಥರು.! ಚಿಕ್ಕ ವಯಸ್ಸಲ್ಲಿರುವಾಗಲೇ ಆ್ಯಕ್ಸಿಡೆಂಟ್ ಒಂದರಲ್ಲಿ ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದರು.

ಅನಾಥಶ್ರಮದಲ್ಲಿ ಬೆಳೆದರು. ಪ್ರಾರ್ಥನಳ ಓದು ಮುಗಿಯುತ್ತಿದ್ದಂತೆ ಅನಾಥಶ್ರಮ ಬಿಟ್ಟು ತನ್ನ ತಂಗಿಯೊಡನೆ ಸಣ್ಣ ಮನೆಮಾಡಿ ವಾಸ ಮಾಡಲಾರಂಭಿಸಿದ್ಲು..! ದುಡಿಮೆಯ ಒಂದು ಭಾಗವನ್ನು ಅನಾಥಶ್ರಮಕ್ಕೆ ತೆಗೆದಿಡ್ತಾ ಇದ್ಲು. ಇನ್ನುಳಿದಿರಿವುದರಲ್ಲಿ ತಂಗಿಯ ಓದು ಮತ್ತು ಜೀವನ..! ತನ್ನ ಟ್ರೀಟ್ಮೆಂಟ್‍ಗೆ ಉಳಿಸಿದ್ದ ದುಡ್ಡು ಕೊನೆಗಾಲದಲ್ಲಿ ಖಾಲಿಯಾಗಿತ್ತು..! ಇವೆಲ್ಲವನ್ನೂ ತನ್ನ ಡೈರಿಯಲ್ಲಿ ಬರೆದಿಟ್ಟು ಪ್ರಾಣಬಿಟ್ಟಳು..! ಅಕ್ಕನೂ ಇಲ್ಲದೆ ಮತ್ತೆ ಅನಾಥೆಯಾದ ಸುಮಾನಳ ಕೈ ಹಿಡಿದು ನಡೆಸುತ್ತಿದ್ದಾನೆ ಗೌತಮ್..!

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...