ಸುಮಲತಾ ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುವುದು ಪಕ್ಕಾ ಆಗಿದೆ. ಯಾವುದೇ ಪಕ್ಷದ ಮೊರೆ ಹೋಗದೆ, ಸ್ವಾತಂತ್ರ್ಯಾಭ್ಯರ್ಥಿಯಾಗಿ ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ.
ಸುಮಲತಾ ಅವರಿಗೆ ಸ್ಯಾಂಡಲ್ ವುಡ್ ಸ್ಟಾರ್ ನಟರ ಬೆಂಬಲ ಸಿಕ್ಕಿದೆ. ನಟ ದರ್ಶನ್ ಹಾಗೂ ಯಶ್ ಇಬ್ಬರೂ ಜೋಡಿ ಎತ್ತುಗಳಾಗಿ ಸುಮಲತಾ ಅವರ ಪರ ನಿಂತಿದ್ದಾರೆ. ಈ ಇಬ್ಬರೂ ನಟರು ಸುಮಲತಾ ಪರ ಪ್ರಚಾರ ಮಾಡಿ ಅವರನ್ನು ಗೆಲ್ಲಿಸುವ ಗುರಿ ಹೊಂದಿದ್ದಾರೆ.
ನಿನ್ನೆ ಪ್ರೆಸ್ ಮೀಟ್ ಮಾಡಿ ಸುಮಲತಾ ತಮ್ಮ ನಿಲುವು ಹೇಳಿದ ನಂತರ ಕನ್ನಡ ಮತ್ತೊಬ್ಬ ನಟ ಸುದೀಪ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸುಮಲತಾ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ”ಅಂಬರೀಶ್ ಅವರನ್ನು ಬಹಳ ಹತ್ತಿರದಿಂದ ನೋಡಿದವರು ನೀವು. ಅದ್ದರಿಂದ ನೀವು ಯಾವ ಜನಗಳಿಗಾಗಿ ಕೆಲಸ ಮಾಡಲು ಬಯಸುತ್ತೀರಾ ಅವರಿಂದಲೇ ನಿಮಗೆ ಶಕ್ತಿ ಮತ್ತು ಬೆಂಬಲ ದೊರೆಯುತ್ತದೆ.” ಎಂದು ಶುಭ ಹಾರೈಸಿದ್ದಾರೆ.
ಸುದೀಪ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ ”ಧನ್ಯವಾದಗಳು ಪ್ರೀತಿಯ ಸುದೀಪ್. ದಶಕಗಳ ಕಾಲ ನೀವು ನಮ್ಮ ಬದುಕಿನ ಒಂದು ಭಾಗ ಆಗಿದ್ದೀರಿ ಮತ್ತು ನಮ್ಮ ಸಂಬಂಧ ವಿಶೇಷವಾದ್ದದು. ನಿಮ್ಮ ಹಾರೈಕೆಗಳು ನನಗೆ ತುಂಬ ಮುಖ್ಯ ಆಗಿವೆ. ಸವಾಲಿನ ದಾರಿಯಲ್ಲಿ ಸಾಗುತ್ತಿರುವ ನನಗೆ ಧೈರ್ಯ ನೀಡಿ.” ಎಂದಿದ್ದಾರೆ.
ಅಂಬರೀಶ್ ಅವರ ಕುಟುಂಬಕ್ಕೆ ಆಪ್ತರಾಗಿರುವ ನಟರಲ್ಲಿ ಸುದೀಪ್ ಕೂಡ ಒಬ್ಬರು. ಹೀಗಿರುವಾಗ, ಸುದೀಪ್ ಸಹ ಸುಮಲತಾ ಅವರಿಗಾಗಿ ಪ್ರಚಾರ ಮಾಡುತ್ತಾರಾ ಎನ್ನುವ ಕುತೂಹಲ ಇತ್ತು. ಆದರೆ, ಸುದೀಪ್ ಪ್ರಚಾರದಿಂದ ಹಿಂದೆ ಸರಿದಿದ್ದಾರೆ. ದರ್ಶನ್ ಇರುವಾಗ ಬೇರೆಯವರ ಅಗತ್ಯ ಇಲ್ಲ ಎಂದಿರುವ ಕಿಚ್ಚ ಯಾರಿಗೂ ಬೆಂಬಲ ಸೂಚಿಸಿಲ್ಲ.