ಫ್ರಿಜ್ʼನಲ್ಲಿಟ್ಟಿದ್ದ ಕಲ್ಲಂಗಡಿ ಹಣ್ಣು ತಿನ್ನಬಾರದು ಏಕೆ ಗೊತ್ತಾ..?
ಸಾಮಾನ್ಯವಾಗಿ ಬೇಸಿಗೆಯಲ್ಲಿ ಆಹಾರ ಪದಾರ್ಥಗಳನ್ನು ಹೊರಗಡೆ ಇಟ್ಟುಕೊಳ್ಳುವುದರಿಂದ, ಬೇಗನೇ ಹಾಳಾಗಿ ಬಿಡುತ್ತವೆ. ಅಂತೆಯೇ ಕೆಲವೊಂದು ಹಣ್ಣು-ತರಕಾರಿಗಳು ಕೂಡ ಅಷ್ಟೇ, ಒಂದೆರಡು ದಿನಗಳವರೆಗೆ ಹಾಗೆಯೇ ಹೊರಗಡೆ ಇಟ್ಟುಬಿಟ್ಟರೆ ಬೇಗನೇ ಹಾಳಾಗಿಬಿಡುತ್ತವೆ.
ಹೀಗಾಗಿ ನಾವು ಆದಷ್ಟು ಇಂತಹ ಪದಾರ್ಥಗಳನ್ನು ಫ್ರಿಜ್‌ನಲ್ಲಿ ಇಟ್ಟುಬಿಡುತ್ತೇವೆ. ಆದರೆ ಕೆಲವೊಮ್ಮೆ ಫ್ರಿಜ್‌ನಲ್ಲಿ ಇಟ್ಟಿರುವ ಆಹಾರಗಳು ಕೂಡ ಕೊಳೆತುಹೋಗಿರುತ್ತವೆ! ಉದಾಹರಣೆಗೆ ಟೊಮೆಟೊ ಹಣ್ಣು ಹಾಳಾಗಬಾರದು ಎಂದು ರೆಫ್ರಿಜರೇಟರ್‌ನಲ್ಲಿ ಇಟ್ಟುಬಿಡುತ್ತೇವೆ. ಆದರೆ ವಾರದ ಬಳಿಕ ಕೆಲವೊಂದು ಟೊಮೆಟೊ ಹಣ್ಣುಗಳು ಕೊಳೆತು ಹೋಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು..
ಹೀಗಾಗಿ ನಾವು ಎಲ್ಲಾ ಆಹಾರ ಪದಾರ್ಥವನ್ನು ರೆಫ್ರಿಜರೇಟರ್ ಅಂದರೆ ಫ್ರಿಜ್‌ನಲ್ಲಿ ಸಂಗ್ರಹಿಸುವುದು ಒಳ್ಳೆಯದಲ್ಲ ಎಂದು ತಜ್ಞರೇ ಹೇಳುತ್ತಾರೆ. ಯಾಕೆಂದರೆ ಕೆಲವೊಂದು ಆಹಾರಗಳನ್ನು ಫ್ರಿಜ್‌ನಲ್ಲಿಡುವುದರಿಂದ ಆಹಾರದ ರುಚಿ ಬದಲಾಗಬಹುದು ಅಥವಾ ನಮ್ಮ ಆರೋಗ್ಯದ ಮೇಲೆ ಹಲವು ರೀತಿ ಅಡ್ಡಪರಿಣಾಮಗಳು ಕೂಡ ಬೀರಬಹುದು.
ಅನೇಕ ಮಂದಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾರೆ. ಏಕೆಂದರೆ ಬೇಸಿಗೆಯ ಬಿಸಿಲಿನ ಬೇಗೆಯಿಂದ ನಮ್ಮ ದೇಹವನ್ನು ಈ ಹಣ್ಣು ತಂಪಾಗಿಡುತ್ತದೆ. ಅಲ್ಲದೇ ಇದರಲ್ಲಿ 92% ನೀರಿನ ಅಂಶವಿದೆ. ಹಾಗಾಗಿ ಇದು ನಮ್ಮ ದೇಹಕ್ಕೆ ನೀರಿನ ಅಂಶವನ್ನು ಹೆಚ್ಚಾಗಿ ಒದಗಿಸುತ್ತದೆ. ಈ ಕಾರಣ ಬೇಸಿಗೆ ಬಂತೆಂದರೆ ಈ ಹಣ್ಣಿಗೆ ಡಿಮ್ಯಾಂಡ್ ಜಾಸ್ತಿ. ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪಿನ್, ಆಂಟಿ ಆಕ್ಸಿಡೆಂಟ್ ಅಂಶಗಳು, ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ಅಮೈನೋ ಆಮ್ಲಗಳು ಹೆಚ್ಚಾಗಿವೆ. ಅಲ್ಲದೇ ಈ ಹಣ್ಣು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಬಹಳ ಸಹಾಯಕವಾಗಿದೆ. ಏಕೆಂದರೆ ಇದರಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಇದ್ದು, ಈ ಹಣ್ಣಿನ ಸೇವನೆ ನಮ್ಮ ಹೊಟ್ಟೆಯನ್ನು ತುಂಬಾ ಹೊತ್ತು ತುಂಬಿಸಿರುತ್ತದೆ.
ಆದರೆ ಕೆಲ ಮಂದಿ ಕಲ್ಲಂಗಡಿಯನ್ನು ರೆಫ್ರಿಜರೇಟರ್ನಲ್ಲಿ ಇಟ್ಟು ತಿನ್ನುತ್ತಾರೆ. ಆದರೆ ಹೀಗೆ ಮಾಡುವುದರಿಂದ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಸಾಮಾನ್ಯವಾಗಿ ಕೆಲ ಮಂದಿ ಹಣ್ಣುಗಳನ್ನು ಮಾರುಕಟ್ಟೆಯಿಂದ ಖರೀದಿಸಿ ಮನೆಗೆ ತಂದ ನಂತರ ಫ್ರಿಜ್ ನಲ್ಲಿ ಇಡುತ್ತಾರೆ. ಆದರೆ ಹಣ್ಣನ್ನು ಕತ್ತರಿಸಿ ಫ್ರಿಜ್ ನಲ್ಲಿ ಇಡುವ ಅಭ್ಯಾಸ ನಿಮಗಿದ್ದರೆ ಇನ್ಮುಂದೆ ಬಿಟ್ಟುಬಿಡಿ. ಅದರಲ್ಲೂ ಕಲ್ಲಂಗಡಿ ಹಣ್ಣನ್ನು ಅಪ್ಪಿತಪ್ಪಿಯೂ ಫ್ರಿಜ್ ನಲ್ಲಿ ಇಡಲೇಬೇಡಿ.
ಬಿಸಿಲಿನಿಂದ ಕಲ್ಲಂಗಡಿ ಹಣ್ಣನ್ನು ರೆಫ್ರಿಜಿರೇಟರ್ ನಲ್ಲಿಟ್ಟು ತಿನ್ನಲು ಬಹಳ ತಂಪಾಗಿ ಮತ್ತು ರುಚಿಕರವಾಗಿರುತ್ತದೆ. ಆದರೆ ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಫ್ರಿಜ್ ನಲ್ಲಿ ಇಟ್ಟರೆ ಫುಡ್ ಪಾಯಿಸನ್ ಆಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಕತ್ತರಿಸಿದ ಕಲ್ಲಂಗಡಿ ಹಣ್ಣಿನಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಶುರುವಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಹಾನಿಕರವಾಗಿರುತ್ತದೆ. ಅಲ್ಲದೇ ಸಂಪೂರ್ಣ ಪೌಷ್ಟಿಕಾಂಶವನ್ನು ಪಡೆಯಬೇಕಾದರೆ ಫ್ರಿಜ್ನಲ್ಲಿಟ್ಟ ಕಲ್ಲಂಗಡಿ ಹಣ್ಣನ್ನು ತಿನ್ನುವುದನ್ನು ನಿಲ್ಲಿಸಬೇಕು. ಕಲ್ಲಂಗಡಿಯನ್ನು ರೆಫ್ರಿಜರೇಟರ್ನಲ್ಲಿ ಇಡುವುದಕ್ಕಿಂತ ಕೋಣೆಯ ಉಷ್ಣಾಂಶದಲ್ಲಿ ಇಡುವುದು ಉತ್ತಮ ಎಂದು ಸಂಶೋಧನೆ ತಿಳಿಸುತ್ತದೆ.