ಇವರ ಮನೆಯಲ್ಲಿ ಕಿತ್ತು ತಿನ್ನೋ ಬಡತನ. ಅದೆಷ್ಟರ ಮಟ್ಟಿಗೆ ಅಂದ್ರೆ ಸ್ಪರ್ಧೆಯಲ್ಲಿ ಓಡಲು ಒಂದು ಜೊತೆ ಶೂ ಖರೀದಿಸುವ ಶಕ್ತಿ ಕೂಡ ಇರಲಿಲ್ಲ! ಹಾಗಂತ ಇವರು ಹಠ ಬಿಡಲಿಲ್ಲ. ಬಡತನಕ್ಕೆ ಸವಾಲೊಡ್ಡಿ ಭಾರತಕ್ಕೆ ಚಿನ್ನದ ಪದಕ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸಾಧನೆ ಮೆಚ್ಚಿ ಇಡೀ ದೇಶವೇ ಸಲಾಂ ಹೊಡೆಯುತ್ತಿದೆ!
ಪ್ರತಿಭೆಯನ್ನು ಗುರುತಿಸುವುದೂ ಕೂಡ ಒಂದು ಪ್ರತಿಭೆ! ಅದು ಸತ್ಯದ ಮಾತು ಕೂಡ. ಶಾಲೆಯ ಫಿಸಿಕಲ್ ಟೀಚರ್ ಈಕೆಯಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ್ರು. ಅಂದು ಟೀಚರ್ನಿಂದ ಗುರುತಿಸಿಕೊಂಡ ಇವರು ಇಂದು ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಸಾಧನೆ ಮಾಡಿದ್ದಾರೆ. ಅಂತಹ ಅದ್ಭುತ ಸಾಧನೆ ಮಾಡಿದ ಓಟಗಾರ್ತಿಯೇ ಪಿ.ಯು ಚಿತ್ರಾ.
ಚಿತ್ರಾ ಅವರಿಗೆ ಆಗ ಕೇವಲ 12 ವರ್ಷ ವಯಸ್ಸು ಅಷ್ಟೇ. ಚಿತ್ರಾಳಲ್ಲಿ ಇದ್ದ ಒಬ್ಬ ಅಥ್ಲೀಟ್ನ್ನು ಪಿ.ಟಿ ಮೇಷ್ಟ್ರು ಗುರುತಿಸಿದ್ರು. ಶಾಲೆಯಲ್ಲಿ ಸಾಧ್ಯವಿರುವ ಎಲ್ಲಾ ತರಬೇತಿಗಳನ್ನು ಕೊಟ್ಟು ಪ್ರೋತ್ಸಾಹ ನೀಡಿದ್ರು. ಟೀಚರ್ ತರಬೇತಿ ಮತ್ತು ಪ್ರೋತ್ಸಾಹದಿಂದ ತನ್ನ ಶ್ರಮವನ್ನು ದುಪ್ಪಟ್ಟು ಹಾಕಿದ ಚಿತ್ರಾ ಅವರನ್ನು ಇಂದು ವಿಶ್ವವೇ ಮಿಂಚಿನ ಓಟಗಾರ್ತಿ ಎಂದು ಹೊಗಳುವಂತೆ ಮಾಡಿದೆ.
ಹೌದು.. ಚಿತ್ರಾ ಅವರ ಕುಟುಂಬದಲ್ಲಿ ಕಿತ್ತು ತಿನ್ನುವಷ್ಟು ಬಡತನವಿತ್ತು. ಅದೆಷ್ಟರ ಮಟ್ಟಿಗೆ ಅಂದ್ರೆ, ಟ್ರ್ಯಾಕ್ ನಲ್ಲಿ ಓಡಲು ಒಂದು ಜೊತೆ ಶೂ ಖರೀದಿಸುವ ಶಕ್ತಿ ಕೂಡ ಇರಲಿಲ್ಲ. ಏಷ್ಯನ್ ಚಾಂಪಿಯನ್ಗೆ ಹೋಗುವ ಮುನ್ನ ಅಭ್ಯಾಸದ ವೇಳೆ ಉತ್ತಮ ಗುಣಮಟ್ಟದ ಶೂ ಇರಬೇಕೆಂದು ತರಬೇತುದಾರರು ತಾಕೀತು ಮಾಡಿದ್ರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಓಡುವಾಗ ಅದಕ್ಕಿಂತ ಗುಣಮಟ್ಟದ ಶೂ ಇರಬೇಕು ಎಂದು ಎಲ್ಲಾರೂ ಹೇಳುತ್ತಿದ್ರು. ಆದ್ರೆ, ಚಿತ್ರಾ ಅವರಿಗೆ ಮನೆಯಲ್ಲಿ ತಾಂಡವವಾಡುತ್ತಿದ್ದ ಬಡತನ ನೋಡಲಾಗದೆ ಹೆತ್ತವರ ಬಳಿ ಹೇಳಿಕೊಳ್ಳಲಿಲ್ಲ.
ಚಿತ್ರಾ ಕೇರಳದ ಪಲಕ್ಕಾಡ್ ಜಿಲ್ಲೆಯ ಮುನ್ರಾಡ್ ಗ್ರಾಮದವರು. 4 ಮಕ್ಕಳ ಪೈಕಿ ಚಿತ್ರಾ ಕೂಡ ಒಬ್ಬರು. ತಂದೆ ತಾಯಿ ಇಬ್ಬರು ದಿನಗೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಅದನ್ನು ಕಣ್ಣಾರೆ ಕಂಡ ಚಿತ್ರಾ ಶೂ ಬಗ್ಗೆ ಹೇಳಿಕೊಳ್ಳಲಿಲ್ಲ.
ಸಿಕ್ಕ ಅವಕಾಶವನ್ನು ಕಳೆದುಕೊಳ್ಳಲು ಮನಸ್ಸು ಒಪ್ಪದೇ ಇರುವಾಗ ಚಿತ್ರಾ ತನ್ನ ಗೆಳತಿ ಹತ್ರ ಚಾಂಪಿಯನ್ ಶಿಪ್ಗೆ ಹೋಗುವ ಹಿಂದಿನ ದಿನ ಶೂ ಬಾಡಿಗೆಗೆ ಕೇಳಿದ್ರು. ಚಿತ್ರಾಳ ಸ್ನೇಹಿತೆ ಸಂತೋಷದಿಂದ ಕೊಡಲು ಒಪ್ಪಿಕೊಂಡಳು. ಆ ಶೂ ಧರಿಸಿ ಭುವನೇಶ್ವರದಲ್ಲಿ ನಡೆದ 22ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 1500 ಮೀಟರ್ ಓಟದಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ರು.
1500 ಮೀಟರ್ ರೇಸ್ ಗೆಲ್ಲುವುದು ಅಂದ್ರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಷ್ಟೇ ಅಲ್ಲ ಅತೀ ಕಠಿಣ ಸ್ಪರ್ಧೆಗಳ ಪೈಕಿ ಇದು. ಇಂತಹ ಆಟ ದಲ್ಲಿ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟ ಸಾಧನೆ ಮಾಡಿದ್ರು ಚಿತ್ರಾ. 1500 ಮೀಟರ್ ದೂರವನ್ನು ಕೇವಲ 4.17.92 ನಿಮಿಷಗಳಲ್ಲಿ ಓಡಿ ಮುಗಿಸಿದ ಚಿತ್ರಾ ಬಂಗಾರದ ಸಾಧನೆ ಮಾಡಿದ್ರು. ಅಷ್ಟೇ ಅಲ್ಲ ತನ್ನ ಬೆಸ್ಟ್ ರೆಕಾರ್ಡ್ ಅನ್ನು 7 ಸೆಕೆಂಡ್ಸ್ ನಿಂದ ಉತ್ತಮಗೊಳಿಸಿದ್ರು.
ಈ ಅದ್ಭುತ ಸಾಧನೆ ಮಾಡಿದ ಚಿತ್ರಾ ಈಗ “ಕ್ವೀನ್ ಆಫ್ ಏಷಿಯಾ ಇನ್ ದಿ ಮೈಲ್” ಅನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಏಷ್ಯನ್ ಸ್ಕೂಲ್ ಚಾಂಪಿಯನ್ ಶಿಪ್ ಗೆದ್ದ ಚಿತ್ರಾಳಿಗೆ ಕೇರಳ ಸರಕಾರ 2 ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಆದ್ರೆ ಚಿತ್ರಾಳಿಗೆ ಬೇರೆಯೇ ಕನಸುಗಳಿವೆ. ಹೊಟ್ಟೆ ತುಂಬಿಸಬಲ್ಲ ಉದ್ಯೋಗದ ಅವಶ್ಯಕತೆ ಇದೆ.
ಸಾಮಾನ್ಯವಾಗಿ ಅಥ್ಲೀಟ್ ಗಳು ಈ ರೀತಿಯ ಸಾಧನೆ ಮಾಡಿದ ಬಳಿಕ ಒಂದು ವಾರ ಅಥವಾ 15 ದಿನ ಸುದ್ದಿಯಲ್ಲಿರುತ್ತಾರೆ. ನಂತರ ಎಲ್ಲಾರೂ ಮರೆತು ಬಿಡುತ್ತಾರೆ. ಆದ್ರೆ ಸರ್ಕಾರ ಇಂತಹವರನ್ನು ಗುರುತಿಸಿ ಸಹಾಯ ಮಾಡಿ ಇನ್ನು ಹೆಚ್ಚು ಸಾಧನೆ ಮಾಡಲು ಪ್ರೋತ್ಸಾಹ ನೀಡಬೇಕು.
ಒಟ್ಟಾರೆಯಾಗಿ ಚಿತ್ರಾಳ ಧೈರ್ಯ ಮತ್ತು ಸಾಧನೆ ನಮಗೆಲ್ಲಾ ಸ್ಪೂರ್ತಿ. ಚಿತ್ರಾ ಇನ್ನು ಎತ್ತರಕ್ಕೆ ಬೆಳೆದು ನಮ್ಮ ದೇಶಕ್ಕೆ ಇನ್ನು ಹೆಚ್ಚು ಕೀರ್ತಿ ತರಲಿ ಎಂಬುದೆ ನಮ್ಮಲ್ಲರ ಆಶಯ.