ಬದುಕಿರುವಾಗಲೇ ಸಾಯಿಸಿಬಿಟ್ರಲ್ಲಾ; ಇದೆಂಥ ಶೋಕಿ

1
39

ಸಾಮಾಜಿಕ ಜಾಲತಾಣ ಯುಗವಿದು ಆತುರದ ಯುಗ. ‘ನಮ್ಮಲ್ಲೇ ಮೊದಲು’ ಎಂದು ಸುಳ್ಳೇ ಎದೆಯುಬ್ಬಿಸುವ ಮಾಧ್ಯಮಗಳಿಂದ ಹಿಡಿದು ಮೊಬೈಲ್ ಕೈಯಲ್ಲಿ ಹಿಡಿದಿರುವ ಸಾಮಾನ್ಯ ನಾಗರೀಕನವರೆಗೂ ಎಲ್ಲರಿಗೂ ಆತುರ. ಯಾವುದೇ ವಿಷಯಕ್ಕಾಗಲಿ ಶೀಘ್ರವಾಗಿ ಪ್ರತಿಕ್ರಿಯಿಸಿಬಿಡಬೇಕು ಎಂಬ ಹುಕಿ ಎಲ್ಲರಲ್ಲಿ.

ನಟ ಸಂಚಾರಿ ವಿಜಯ್ ಇನ್ನೂ ಆಸ್ಪತ್ರೆಯಲ್ಲಿ ಉಸಿರಾಡುತ್ತಿದ್ದಾರೆ. ಆದರೆ ಆಗಲೇ ನಾಡಿನ ಗಣ್ಯಾತಿಗಣ್ಯರಿಂದ ಹಿಡಿದು ಬಹುತೇಕರು ವಿಜಯ್‌ ಸತ್ತರೆಂದು ಘೋಷಿಸಿ ಸಂತಾಪ ಸೂಚಿಸಿ ಆಗಿದೆ. ಸಾವು ಘೋಷಣೆ ಆಗುವ ಮುನ್ನವೇ ಹೀಗೆ ಸತ್ತರೆಂದು ಹೇಳುವುದು, ಸಂತಾಪ ಸೂಚಿಸುವುದು ಅದೆಷ್ಟು ಅಸೂಕ್ಷ್ಮ. ಸಾವಿಗೆ ಮುನ್ನವೇ ಚರಮ ಗೀತೆಯೇ?

ಇದೀಗ 1:30 ಕ್ಕೆ ಅಪೊಲೊ ಆಸ್ಪತ್ರೆ ಬಿಡುಗಡೆ ಮಾಡಿರುವ ಆರೋಗ್ಯ ಮಾಹಿತಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಸಂಚಾರಿ ವಿಜಯ್ ಬದುಕಿದ್ದಾರೆಂದು. ಅವರ ಮೆದುಳಿಗೆ ತೀವ್ರ ಪೆಟ್ಟಾಗಿದೆ ನಿಜ ಆದರೆ ಅವರು ಸತ್ತಿಲ್ಲ. ಅವರಿನ್ನೂ ಉಸಿರಾಡುತ್ತಿದ್ದಾರೆ. ವಿಜಯ್ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ ಹಾಗೆಂದು ಅವರು ಸತ್ತೇ ಹೋದರು ಎಂಬ ನಿರ್ಣಯಕ್ಕೆ ಬರುವುದು ಅಮಾನವೀಯ. ಅವರೇ ಸರ್ವಸ್ವವೂ ಆಗಿರುವ ವಿಜಯ್ ಕುಟುಂಬಕ್ಕೆ, ಸ್ನೇಹಿತರಿಗೆ ಇನ್ನೂ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ಈ ಆತುರದ ಸಂತಾಪಗಳು ದೊಡ್ಡ ಪೆಟ್ಟು ಕೊಡುತ್ತವೆ.

ಸಂತಾಪ ಸೂಚಿಸಲು ಆತುರವೇಕೆ? ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುವುದು ತಮ್ಮ ‘ಇರುವಿಕೆ’ ಪ್ರದರ್ಶಿಸಲಷ್ಟೆ ಎನಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿ ಒಂದು ‘ಕಾರ್ಯ’ ಮುಗಿಸಿದ್ದೇವೆ ಎಂಬ ತೃಪ್ತಿಯಲ್ಲಿ ಆ ಪೋಸ್ಟ್‌ಗೆ ಬರುವ ಲೈಕು, ಕಮೆಂಟ್‌ಗಳನ್ನು ಎಣಿಸುತ್ತಾ ಕೂರುತ್ತಾರೆ. ಈ ಕಾಯಿಲೆ ಸೆಲೆಬ್ರಿಟಿಗಳಿಗೂ ಇದೆ ಬಿಡಿ.. ಒಟ್ಟಿನಲ್ಲಿ ಬದುಕಿರುವಾಗಲೇ ಸಂಚಾರಿ ವಿಜಯ್‌ರನ್ನು ಸಾಯಿಸಿದ್ದಂತೂ ನಿಜ.

1 COMMENT

LEAVE A REPLY

Please enter your comment!
Please enter your name here