ಹೊಟೇಲ್ ಲೋಟ ತೊಳೆಯುತ್ತಿದ್ದ ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ಪಡೆದದ್ದು ಹೇಗೆ?

0
27

ನಟ ಸಂಚಾರಿ ವಿಜಯ್ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ನಟನೆಯ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ಕನ್ನಡದ ನಟ ವಿಜಯ್. ಇಂದು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸಂಚಾರಿ ವಿಜಯ್‌ ಈ ಹಂತಕ್ಕೆ ಬೆಳೆದು ಬಂದ ಹಾದಿ ಅತ್ಯಂತ ಕಠಿಣವಾಗಿತ್ತು. ಸಾಮಾನ್ಯ ಹಳ್ಳಿ ಹುಡುಗನೊಬ್ಬ ಹಲವು ಕಷ್ಟಗಳನ್ನು ಕಂಡು ಎತ್ತರಕ್ಕೆ ಏರಿದ ಆ ಪಯಣ ಹಲವರಿಗೆ ಸ್ಪೂರ್ತಿ ತುಂಬಬಲ್ಲದು.

ಸಂಚಾರಿ ವಿಜಯ್‌ ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕಿನ ಪಂಚನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ. ಸುಂದರವಾದ ಬಾಲ್ಯ ಕಳೆದ ವಿಜಯ್ ಯೌವ್ವನಕ್ಕೆ ಕಾಲಿಡುವ ಮುಂಚೆಯೇ ಸರಣಿ ಸವಾಲುಗಳು ಅವರಿಗೆ ಎದುರಾದವು. ನರ್ಸ್ ಆಗಿದ್ದ ಅಮ್ಮ ಗೌರಮ್ಮ ಅನಾರೋಗ್ಯದಿಂದ ಆಸ್ಪತ್ರೆ ಹಿಡಿದರು. ಹಣದ ಕೊರತೆಯಿಂದ ಅವರನ್ನು ಬದುಕಿಸಿಕೊಳ್ಳಲಾಗಲಿಲ್ಲ. ನಂತರ ಕೆಲವೇ ತಿಂಗಳಲ್ಲಿ ತಂದೆಯೂ ನಿಧನ ಹೊಂದಿದರು. ಅಣ್ಣ ಮತ್ತು ಸಂಚಾರಿ ವಿಜಯ್ ಇಬ್ಬರೇ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಯಿತು.

ಸಂದರ್ಶನವೊಂದರಲ್ಲಿ ಸಂಚಾರಿ ವಿಜಯ್ ಅವರೇ ಹೇಳಿಕೊಂಡಿರುವಂತೆ, ‘ಸಹಾಯಕ್ಕಾಗಿ ಅಣ್ಣನ ಜೊತೆಗೆ ಯಾವುದೋ ಅಧಿಕಾರಿಯೊಬ್ಬರನ್ನು ಭೇಟಿ ಮಾಡಲು ಹೋದಾಗ ಇವರನ್ನು ನೋಡಿದ್ದೆ, ‘ಇಂಥ *ಳೆ ಮಕ್ಳಿಗೆ ಯಾಕ್ರಿ ಸಹಾಯ ಮಾಡ್ಬೇಕು ಎಂದು ಹೀನಾ-ಮಾನ ಬೈದು ಅಪಮಾನಿಸಿದ್ದರಂತೆ. ತೀವ್ರ ನಿಂದನೆ, ಅವಮಾನ, ಹಸಿವು, ಹಂಬಲ ಎಲ್ಲವನ್ನೂ ಬಹಳ ಸಣ್ಣ ವಯಸ್ಸಿಗೆ ಅನುಭವಿಸಿದ್ದರು ಸಂಚಾರಿ ವಿಜಯ್. ಜಾತಿಯ ಕಾರಣಕ್ಕೆ ನಿಂದನೆ ಅನುಭವಿಸಿದ್ದ ಸಂಚಾರಿ ವಿಜಯ್, ಮುಂದೆ ಸೆಲೆಬ್ರಿಟಿ ಆದಾಗ ಜಾತಿ ಹೆಸರಲ್ಲಿ ಸನ್ಮಾನ ಮಾಡಲು ಬಂದವರನ್ನು ವಾಪಸ್ ಕಳಿಸಿದ್ದರು. ವಿಜಯ್ ಕಂಡ ಕಷ್ಟಗಳು ಅವರನ್ನು ಇನ್ನಷ್ಟು ಉತ್ತಮ ಮನುಷ್ಯನನ್ನಾಗಿ ರೂಪಿಸಿದವು.

ಸಂಚಾರಿ ವಿಜಯ್ ಹಾಗೂ ಅಣ್ಣನಿಗೆ ಇದ್ದ ಆರ್ಥಿಕ ಪರಿಸ್ಥಿತಿಯಲ್ಲಿ ಕೇವಲ ಒಬ್ಬರಷ್ಟೆ ವಿದ್ಯಾಭ್ಯಾಸ ಮಾಡಬಹುದಾಗಿತ್ತು. ಚೆನ್ನಾಗಿ ಓದುತ್ತಿದ್ದ ಅಣ್ಣನನ್ನು ಓದಲು ಬಿಟ್ಟು ಸಂಚಾರಿ ವಿಜಯ್ ಬೆಂಗಳೂರಿನ ರಾಜಾಜಿನಗರದ ‘ ಮಲ್ನಾಡ್ ಕೆಫೆ’ ಎಂಬಲ್ಲಿ ಲೋಟ ತೊಳೆಯುವ ಕೆಲಸಕ್ಕೆ ಸೇರಿಕೊಂಡರು. ಪ್ರತಿ ತಿಂಗಳು ಅಣ್ಣನಿಗೆ ಹಣ ಕಳಿಸುತ್ತಿದ್ದರು. ಅವೆಲ್ಲ ಬಹಳ ಕಷ್ಟದ ದಿನಗಳು ಸಂಚಾರಿ ವಿಜಯ್‌ಗೆ.

ಅಣ್ಣನ ಓದು ಒಂದು ಹಂತಕ್ಕೆ ಬಂದ ಕೂಡಲೇ ಸಂಚಾರಿ ವಿಜಯ್‌ ಓದಲು ಆರಂಭಿಸಿದರು. ಅಣ್ಣ ಕೆಲಸಕ್ಕೆ ಹೋಗಿ ವಿಜಯ್‌ ಅನ್ನು ಸಾಕಲು ಆರಂಭಿಸಿದರು. ಚೆನ್ನಾಗಿಯೇ ಓದುತ್ತಿದ್ದ ಸಂಚಾರಿ ವಿಜಯ್ ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರ್‌ ಸೀಟು ಸಹ ಪಡೆದರು. ಎಂಜಿನಿಯರಿಂಗ್ ಓದಿನ ಸಮಯದಲ್ಲಿಯೇ ರಂಗಭೂಮಿ ಸೆಳೆಯಿತು. ನಾಟಕಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಚನ್ನಾಗಿ ಹಾಡುತ್ತಿದ್ದ ವಿಜಯ್ ಖಾಸಗಿ ಚಾನೆಲ್‌ನ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಸಹ ಭಾಗವಹಿಸಿದರು. ಆದರೆ ಅಲ್ಲಿ ಎಂಟನೇ ಎಪಿಸೋಡ್‌ಗೆ ಎಲಿಮಿನೇಟ್ ಆಗಿ ಪೂರ್ಣವಾಗಿ ನಾಟಕದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡರು. ಎರಡು ನಾಟಕ ನಿರ್ದೇಶನ ಸಹ ಮಾಡಿದ್ದಾರೆ ಸಂಚಾರಿ ವಿಜಯ್.

ನಂತರ ಮಂಸೋರೆ ನಿರ್ದೇಶನದ ಮೊದಲ ಸಿನಿಮಾ ‘ಹರಿವು’ನಲ್ಲಿ ಮುಖ್ಯ ಪಾತ್ರ ದೊರೆತಿತು ವಿಜಯ್‌ಗೆ. ಆದರೆ ಕೆಲವೇ ದಿನಗಳ ಚಿತ್ರೀಕರಣದ ನಂತರ ಸಿನಿಮಾ ನಿಂತುಹೋಯಿತು. ನಂತರ ಮತ್ತೊಬ್ಬ ನಿರ್ಮಾಪಕರು ಸಿನಿಮಾವನ್ನು ಮುಂದುವರೆಸಿದರು ಆದರೆ ಕೆಲವೇ ದಿನದಲ್ಲಿ ಅವರಿಗೆ ಹಣದ ಸಮಸ್ಯೆ ಎದುರಾಗಿ ಸಿನಿಮಾ ನಿಲ್ಲಿಸಲು ಹೇಳಿದರು. ಕೊನೆಗೆ ಸಂಚಾರಿ ವಿಜಯ್ ಹಾಗೂ ಮಂಸೋರೆ ಸೇರಿ ಹಲವರಿಂದ ಸಾಲ ಪಡೆದು ಸಿನಿಮಾ ಪೂರ್ಣಗೊಳಿಸಿದರು. ಸಾಲ ಪಡೆಯುವಾಗ, ‘ಈ ಸಿನಿಮಾ ಮುಗಿದ ಬಳಿಕ ನಾನು ಮತ್ತು ಮಂಸೋರೆ ಬೇರೆಡೆ ಕೆಲಸಕ್ಕೆ ಸೇರಿ ನಿಮ್ಮ ಸಾಲ ತೀರಿಸುತ್ತೇವೆ’ ಎಂದು ಬಾಂಡ್ ಬರೆದುಕೊಟ್ಟಿದ್ದರಂತೆ. ‘ಹರಿವು’ ಸಿನಿಮಾ ಎದುರಿಸಿದ ಕಷ್ಟಗಳದ್ದೇ ಪ್ರತ್ಯೇಕ ಕತೆಯೇ ಆಗುತ್ತದೆ.

‘ಹರಿವು’ ನಂತರ ಸಿನಿಮಾ ಆಸೆಯನ್ನು ಬಹುತೇಕ ಕೈಬಿಟ್ಟಿದ್ದರು ವಿಜಯ್, ಅಷ್ಟರಲ್ಲಿ ‘ಹರಿವು’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿ ಬಂತು. ಅದು ಮತ್ತೆ ವಿಜಯ್‌ ಅವರಲ್ಲಿ ಆಸೆ ಮೂಡಿಸಿತು. ‘ಹರಿವು’ಗೆ ಪ್ರಶಸ್ತಿ ಸಿಕ್ಕರೂ ವಿಜಯ್‌ಗೆ ಹೆಚ್ಚಿನ ಅವಕಾಶಗಳೇನು ಸಿಗಲಿಲ್ಲ. ಅದೇ ಸಮಯದಲ್ಲಿ ಪ್ರಕಾಶ್ ರೈ ನಿರ್ದೇಶನದ ‘ಒಗ್ಗರಣೆ’ ಸಿನಿಮಾದಲ್ಲಿ ವಿಜಯ್ ಹೆಣ್ಣಿನ ಪಾತ್ರದಲ್ಲಿ ನಟಿಸಿದ್ದರು. ಅದೊಂದು ಸಣ್ಣ ಪಾತ್ರ. ಆ ಪಾತ್ರವನ್ನು ನೋಡಿದ ನಿರ್ದೇಶಕ ಲಿಂಗದೇವರು ತಮ್ಮ ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿ ಅವಕಾಶ ನೀಡಿದರು.

 

 

LEAVE A REPLY

Please enter your comment!
Please enter your name here