ಬರೋಬ್ಬರಿ 158 ದಿನ ಕೊರೊನಾ ವಿರುಧ್ಧ ಹೋರಾಡಿದ ಮಹಿಳೆ!

0
58

ಕೋವಿಡ್​ ಸೋಂಕಿತೆಯೊಬ್ಬರು ಸತತ 158 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಕೊನೆಗೂ ಗುಣವಾಗಿ ಮನೆಗೆ ಮರಳಿದ್ದಾರೆ. ರಾಜ್ಯದಲ್ಲಿಯೇ ಇಷ್ಟು ದೀರ್ಘ ಅವಧಿ ಚಿಕಿತ್ಸೆ ಬಳಿಕ ಕರೊನಾ ಸೋಂಕಿನಿಂದ ಗುಣವಾದ ಮೊದಲ ಪ್ರಕರಣ ಇದಾಗಿದೆ.

ಕೊಪ್ಪಳದ 43 ವರ್ಷದ ಗೀತಾ ಅವರಿಗೆ 2021ರ ಜುಲೈನಲ್ಲಿ ಕರೊನಾ ಸೋಂಕು ತಗುಲಿತ್ತು. ಆಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಸಿಟಿ ಸ್ಕಾನ್​ ಮಾಡಿದಾಗ ಸಂಪೂರ್ಣ ಶ್ವಾಸಕೋಶ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿತ್ತು. ಮಹಿಳೆ ಬದುಕುವುದೇ ಅನುಮಾನ ಎಂಬಂತಾಗಿತ್ತು. ಆದರೂ, 108 ದಿನ ವೆಂಟಿಲೇಟರ್​ನಲ್ಲಿ, 8 ದಿನ ಎಚ್​ಎಫ್​ಎನ್ಸಿ ಬೆಡ್​ನಲ್ಲಿ ಮತ್ತು 32 ದಿನ ಆಕ್ಸಿಜನ್​ ಬೆಡ್​ನಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಪವಾಡವೆಂಬಂತೆ ಮಹಿಳೆ ಬದುಕುಳಿದಿದ್ದಾರೆ. ಕೋವಿಡ್​ ಸಮಯದಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪಗಳಿದ್ದವು. ಆದರೆ, ಇನ್ನೇನು ಸತ್ತು ಹೋಗುತ್ತಿದ್ದ ರೋಗಿಗೆ ಸತತ 158 ದಿನ ಚಿಕಿತ್ಸೆ ನೀಡಿ ವೈದ್ಯರು ಬದುಕಿಸುವ ಮೂಲಕ ವೈದ್ಯರು ದೇವರು ಎಂಬ ಮಾತನ್ನು ನಿಜವಾಗಿಸಿದ್ದಾರೆ. ವೈದ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಉತ್ತಮ ಚಿಕಿತ್ಸೆ ಹಾಗೂ ರೋಗಿ ಧೈರ್ಯ ಇದ್ದರೆ ಕೋವಿಡ್​ ಗೆಲ್ಲಬಹುದು ಎಂಬುದಕ್ಕೆ ಈ ಪ್ರಕರಣವೇ ಉದಾಹರಣೆ.

 

ಜುಲೈನಲ್ಲಿ ನನ್ನ ಹೆಂಡತಿ ಕರೊನಾಗೆ ತುತ್ತಾದಳು. ಪರೀಕ್ಷಿಸಿದ ವೈದ್ಯರು ಬದುಕುವ ಸಾಧ್ಯತೆ ಕಡಿಮೆ ಎಂದಿದ್ದರು. ಆದರೂ, ಇಷ್ಟು ದಿನ ಚಿಕಿತ್ಸೆ ನೀಡಿದ್ದಾರೆ. ನಾವ್ಯಾರು ಆಕೆ ಜೊತೆ ಇರಲಿಲ್ಲ. ಆಸ್ಪತ್ರೆ ಸಿಬ್ಬಂದಿಯೇ ಎಲ್ಲ ಮಾಡಿದ್ದಾರೆ. ಅವರಿಗೆ ನಾನು ಋಣಿ ಎಂದು ಗೀತಾಳ ಪತಿ ಭರಮಪ್ಪ ಭಾವುಕರಾದರು.

LEAVE A REPLY

Please enter your comment!
Please enter your name here