ಬಹುಕೋಟಿ ವಿಮಾನಯಾನ ಹಗರಣ !? ಇಡಿ ಮುಂದೆ ಪ್ರಫುಲ್ ಹಾಜರ್ !

0
323

ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾಗೆ ಕೋಟ್ಯಂತರ ರೂ.ಗಳ ನಷ್ಟಕ್ಕೆ ಕಾರಣವಾದ ವಿಮಾನಯಾನ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಮತ್ತು ಎನ್‍ಸಿಬಿ ನಾಯಕ ಪ್ರಫುಲ್ ಪಟೇಲ್ ಇಂದು ಬೆಳಿಗ್ಗೆ ಜಾರಿ ನಿರ್ದೇಶನಾಲಯದ (ಇಡಿ)ಮುಂದೆ ವಿಚಾರಣೆಗೆ ಹಾಜರಾದರು.

ಇಡಿ ಅಧಿಕಾರಿಗಳು ಈ ಸಂಬಂಧ ಕೇಳಿದ್ದ ಅನೇಕ ಪ್ರಶ್ನೆಗಳಿಗೆ ರಾಜ್ಯಸಭಾ ಸದಸ್ಯರು ಆಗಿರುವ ಪ್ರಫುಲ್ ಪಟೇಲ್ ಉತ್ತರಿಸಿದರು. ಇಡಿ ನೀಡಿದ್ದ ನೋಟಿಸ್ ಅನ್ವಯ ಇಂದು ಬೆಳಿಗ್ಗೆ 10.30ರಲ್ಲಿ ದೆಹಲಿಯ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿಗೆ ಆಗಮಿಸಿದ ಪ್ರಫುಲ್ ಪಟೇಲ್ ಅವರನ್ನು ಹಿರಿಯ ಅಧಿಕಾರಿಗಳು ಕಾರ್ಯಾಲಯದ ಗೌಪ್ಯ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿದರು.

ವಿಮಾನಯಾನ ಲಾಬಿದಾರ ದೀಪಕ್ ತಲ್ವಾರ್‍ನನ್ನು ಇಡಿ ಅಧಿಕಾರಿಗಳು ಬಂಧಿಸಿದ ನಂತರ ಆತ ನೀಡಿದ್ದ ಕೆಲವೊಂದು ಮಾಹಿತಿ ಆಧಾರದ ಮೇಲೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದ ಪ್ರಫುಲ್ ಪಟೇಲ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆಯ ಮಾಜಿ ಸಚಿವರು ಇವರಾಗಿದ್ದಾರೆ. ದೀಪಕ್ ತಲ್ವಾರ್ ಮಧ್ಯಪ್ರಾಚ್ಯದ ಕೆಲವು ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಕಿದ್ದ ಅನೇಕ ಪ್ರಯಾಣಿಕರು ಆ ಕಂಪನಿಗಳತ್ತ ಹೋಗುವಂತೆ ಮಾಡಿ ಸಾಕಷ್ಟು ಕಮಿಷನ್ ಗಳಿಸಿದ್ದೇ ಅಲ್ಲದೆ ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್‍ಲೈನ್ಸ್ ಸಂಸ್ಥೆಗೆ ಕೋಟ್ಯಂತರ ರೂ.ಗಳ ನಷ್ಟ ಉಂಟು ಮಾಡಿದ್ದರು.

ಈ ಹಗರಣದಲ್ಲಿ ಆಗಿನ ಯುಪಿಎ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಪ್ರಫುಲ್ ಪಟೇಲ್ ಶಾಮೀಲಾಗಿದ್ದಾರೆ ಎಂದು ದೀಪಕ್ ತಲ್ವಾರ್ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here