ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಹೊಸ ಸರ್ಕಾರ ರಚನೆಗೆ ಬಿಜೆಪಿಯಲ್ಲಿ ಭರ್ಜರಿ ಸಿದ್ಧತೆ ನಡೆದಿದ್ದು, ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಗುರುವಾರದಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ.
ಇದರ ಮಧ್ಯೆ ಮಂಗಳವಾರದಂದು ನಡೆದ ವಿಶ್ವಾಸಮತ ಯಾಚನೆಗೂ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಮಮಾರ್ಗದಿಂದ ಸರ್ಕಾರ ರಚಿಸಿದವರು ಬಹಳ ಕಾಲ ಅಧಿಕಾರದಲ್ಲಿ ಉಳಿದಿಲ್ಲ. ಈಗ ನೀವು ಸರ್ಕಾರ ರಚಿಸಿದರೂ ಒಂದು ವರ್ಷಕ್ಕಿಂತ ಅಧಿಕ ಕಾಲ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಯಡಿಯೂರಪ್ಪನವರನ್ನು ಉದ್ದೇಶಿಸಿ ಭವಿಷ್ಯ ನುಡಿದಿದ್ದಾರೆ.
ಶಾಸಕರು ರಾಜೀನಾಮೆ ನೀಡಿರುವುದರ ಹಿಂದೆ ನಮ್ಮ ಕೈವಾಡವಿಲ್ಲವೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಇದನ್ನು ಮಾಡುತ್ತಿರುವುದು ಅವರೇ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ ಎಂದು ಕುಟುಕಿದ ಸಿದ್ದರಾಮಯ್ಯ, ಶಾಸಕರಿಗೆ 25ರಿಂದ 30 ಕೋಟಿ ರೂಪಾಯಿ ಕೊಟ್ಟು ಅವರನ್ನು ಖರೀದಿಸಲು ಹಣ ಬಂದಿದ್ದು ಎಲ್ಲಿಂದ ಎಂಬ ವಿಚಾರವನ್ನು ಬಿಜೆಪಿ ನಾಯಕರು ರಾಜ್ಯದ ಜನತೆಯ ಮುಂದಿಡಬೇಕು ಎಂದು ಒತ್ತಾಯಿಸಿದರು.