*ಬೆಂಗಳೂರಿನಲ್ಲಿ ಅಮರನ್ ಸಿನಿಮಾ ಪ್ರಚಾರ ಮಾಡಿದ ಶಿವಕಾರ್ತಿಕೇಯನ್*

ತಮಿಳು ನಟ ಶಿವಕಾರ್ತಿಕೇಯನ್ ಅಭಿನಯದ ಅಮರನ್ ಸಿನಿಮಾ ಬೆಳಕಿನ ಹಬ್ಬ ದೀಪಾವಳಿಗೆ ಬೆಳ್ಳಿ ತೆರೆಗೆ ಅಪ್ಪಳಿಸುತ್ತಿದೆ. ಇದರ ಜೊತೆಗೆ ಸಿನಿಮಾದ ಪ್ರಚಾರ ಕಾರ್ಯ ಕೂಡ ವೇಗ ಪಡೆದುಕೊಂಡಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ರೊಬ್ಬರ ಜೀವನಾಧಾರಿತ ಸಿನಿಮಾವಾಗಿದ್ದು ಅಕ್ಟೋಬರ್ 31 ರಂದು ಅಭಿಮಾನಿಗಳ ಮುಂದೆ ಬರುತ್ತಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ನಟ ಶಿವಕಾರ್ತಿಕೇಯನ್ ಸಿಲಿಕಾನ್ ಸಿಟಿಗೆ ನಿನ್ನೆ ಆಗಮಿಸಿದ್ದರು.

ದಕ್ಷಿಣ ಭಾರತದ ಬಹುಭಾಷಾ ನಟಿ, ಸೌತ್ನ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಹಾಗೂ ನಟ ಶಿವಕಾರ್ತಿಕೇಯನ್ ಜೋಡಿಯಾಗಿ ಅಮರನ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರುವ ಅಮರಾನ್ ಚಿತ್ರ ನೋಡಲು ಫ್ಯಾನ್ಸ್ ಕಾತುರದಲ್ಲಿದ್ದಾರೆ. ಇದರ ಮಧ್ಯೆ ಈ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ನಟ ಶಿವಕಾರ್ತಿಕೇಯನ್ ಬಂದಿದ್ದರು. ಬೆಂಗಳೂರಿನ ಕೋರಮಂಗಲದ ನೆಕ್ಸಸ್ ಮಾಲ್ನಲ್ಲಿ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಡೆಯಿತು. ಕಾರ್ಯಕ್ರಮದಲ್ಲಿ ಶಿವಕಾರ್ತಿಕೇಯನ್ ಭಾಗಿಯಾಗಿದ್ದರು. ಬಳಿಕ ಕನ್ನಡದಲ್ಲಿಯೇ ನಮಸ್ಕಾರ ಹೇಳಿ ಬೆಂಗಳೂರಿನ ನಂಟಿನ ಬಗ್ಗೆ ವಿವರಿಸಿದ ಶಿವಕಾರ್ತಿಕೇಯನ್ ಅರಮನ್ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲ ಚಿತ್ರದ ಮೇಲೆ ಇರಲಿ ಎಂದರು.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ ಮುಕುಂದ್ ವರದರಾಜನ್ ಜೀವನಾಧಾರಿತವೇ ಅಮರನ್ ಸಿನಿಮಾದ ಕಥೆ. ದೀಪಾವಳಿಯಂದು ಭರ್ಜರಿ ಓಪನಿಂಗ್ ಪಡೆಯುವ ಸೂಚನೆ ಕೊಟ್ಟಿದೆ. ಅಮರಾನ್ ಸಿನಿಮಾವನ್ನು ರಾಜಕುಮಾರ್ ಪೆರಿಯಸಾಮಿ ನಿರ್ದೇಶನ ಮಾಡಿದ್ದು, ಜಿ.ವಿ.ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ, ಸಿ.ಎಚ್.ಸಾಯಿ ಅವರ ಛಾಯಾಗ್ರಹಣ ಮತ್ತು ಆರ್. ಕಲೈವನನ್ ಅವರ ಸಂಕಲನ ಚಿತ್ರಕ್ಕಿದೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ಇಂಟರ್ನ್ಯಾಷನಲ್ ಜಂಟಿಯಾಗಿ ನಿರ್ಮಾಣ ಮಾಡಿದೆ.







