ಅಕ್ಟೋಬರ್ 1 ರಿಂದ ಕರ್ನಾಟಕದಲ್ಲಿ ಚಿತ್ರಮಂದಿರಗಳಿಗೆ 100% ಅನುಮತಿ ನೀಡಲಾಗಿದೆ. ಇದರೊಂದಿಗೆ ಬಹಳ ದಿನಗಳಿಂದ ರಿಲೀಸ್‌ಗಾಗಿ ಕಾಯುತ್ತಿದ್ದ ಸ್ಟಾರ್ ನಟರ ಚಿತ್ರಗಳು ಒಂದೊಂದೆ ರಿಲೀಸ್ ದಿನಾಂಕ ಘೋಷಣೆ ಮಾಡ್ತಿವೆ. ಪ್ರಮುಖವಾಗಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3, ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಹಾಗೂ ದುನಿಯಾ ವಿಜಯ್ ಪ್ರಪ್ರಥಮ ಬಾರಿಗೆ ನಿರ್ದೇಶಿಸಿರುವ ಸಲಗ ಚಿತ್ರಗಳ ಬಿಡುಗಡೆ ದಿನಾಂಕದ ಮೇಲೆ ಹೆಚ್ಚು ಗಮನವಿತ್ತು. ನಿರೀಕ್ಷೆಯಂತೆ ಈ ಮೂರು ಚಿತ್ರಗಳು ರಿಲೀಸ್ ದಿನಾಂಕ ಲಾಕ್ ಮಾಡಿಕೊಂಡಿದೆ.
ದಸರಾ ಹಬ್ಬದ ಪ್ರಯುಕ್ತ ಕೋಟಿಗೊಬ್ಬ ಹಾಗೂ ಸಲಗ ಚಿತ್ರಗಳು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದ್ದು, ಅಕ್ಟೋಬರ್ ಕೊನೆಯಲ್ಲಿ ಭಜರಂಗಿ ದರ್ಶನಕ್ಕೆ ಹ್ಯಾಟ್ರಿಕ್ ಹೀರೋ ಮುಹೂರ್ತ ನಿಗದಿಪಡಿಸಿಕೊಂಡಿದ್ದಾರೆ. ಈ ನಡುವೆ ಸ್ಟಾರ್ ಸಿನಿಮಾಗಳ ನಡುವೆ ಬಿಡುಗಡೆ ದಿನಾಂಕಗಳ ಕ್ಲಾಷ್ ಆಗ್ತಿದೆ. ಒಂದೇ ದಿನ ಎರಡೆರಡು ಚಿತ್ರಗಳು ಥಿಯೇಟರ್‌ಗೆ ಲಗ್ಗೆಯಿಡುತ್ತಿದೆ. ಶಿವಣ್ಣನ ಭಜರಂಗಿ 2 ಚಿತ್ರಕ್ಕೆ ಈಗ ಮತ್ತೊಬ್ಬ ಸ್ಟಾರ್ ನಟನ ಚಿತ್ರ ಫೈಟ್ ನೀಡಲು ಮುಂದಾಗಿದೆ.
ಜಯಣ್ಣ-ಬೋಗೇಂದ್ರ ನಿರ್ಮಾಣದಲ್ಲಿ ತಯಾರಾಗಿರುವ ಭಜರಂಗಿ 2 ಸಿನಿಮಾ ಅಕ್ಟೋಬರ್ 29ಕ್ಕೆ ಚಿತ್ರಮಂದಿರಕ್ಕೆ ಬರಲಿದೆ. ಈ ಹಿಂದೆ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಆಗಸ್ಟ್ 20ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, 50% ಅನುಮತಿ ಇದ್ದ ಕಾರಣ ಬಿಡುಗಡೆಯಿಂದ ಹಿಂದಕ್ಕೆ ಸರಿದಿತ್ತು. ಈಗ ಅಕ್ಟೋಬರ್ 1 ರಿಂದ ಥಿಯೇಟರ್‌ಗಳಿಗೆ ಪೂರ್ಣ ಅನುಮತಿ ಸಿಕ್ಕಿದ್ದು, ಅದೇ ತಿಂಗಳಲ್ಲಿ ಕೊನೆಯಲ್ಲಿ ಭಜರಂಗಿ ಎಂಟ್ರಿಯಾಗಲಿದೆ.
ಶಿವಣ್ಣನ ಭಜರಂಗಿ 2 ಚಿತ್ರದೊಂದಿಗೆ ಲವ್ಲಿ ಸ್ಟಾರ್ ಪ್ರೇಮ್ ನಟನೆಯ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಚಿತ್ರವೂ ಥಿಯೇಟರ್‌ಗೆ ಬರ್ತಿದೆ. ಪ್ರೇಮ್ ಅಭಿನಯಿಸಿರುವ ಚಿತ್ರದ ರಿಲೀಸ್ ದಿನಾಂಕವೂ ಘೋಷಣೆಯಾಗಿದ್ದು, ಅಕ್ಟೋಬರ್ 29ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರಕ್ಕೆ ರಾಘವೇಂದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಕ್ಷಿತಾ ಕೆಡಂಬಾಡಿ ಮತ್ತು ಡಾ ರಾಜ್ ಕುಮಾರ್ ಜಾನಕಿ ರಾಮನ್ ಇಬ್ಬರು ಬಂಡವಾಳ ಹಾಕಿದ್ದಾರೆ. ಇದೊಂದು ರೋಮ್ಯಾಂಟಿಕ್ ಜಾನರ್ ಸಿನಿಮಾ ಆಗಿದ್ದು, ಈ ಚಿತ್ರದಲ್ಲಿ ಪ್ರೇಮ್ ಹಲವು ಶೇಡ್ ಗಳಲ್ಲಿ ನಟಿಸುತ್ತಿದ್ದಾರಂತೆ. ನವನಟಿ ಬ್ರಿಂದಾ ಆಚಾರ್ಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಲೈಫ್ ಜೊತೆ ಒಂದು ಸೆಲ್ಫಿ’ ಸಿನಿಮಾದಲ್ಲಿ ಪ್ರೇಮ್ ಕೊನಯೆದಾಗಿ ಕಾಣಿಸಿಕೊಂಡಿದ್ದರು. ‘ಯಜಮಾನ’ ಚಿತ್ರದ ಹಾಡೊಂದರಲ್ಲಿ ಅತಿಥಿ ಪಾತ್ರ ಮಾಡಿದ್ದರು.