ರೋರಿಂಗ್ ಸ್ಟಾರ್ ಶ್ರೀ ಮುರುಳಿ ಮತ್ತು ಭರ್ಜರಿ ಖ್ಯಾತಿಯ ಡೈರೆಕ್ಟರ್ ಚೇತನ್ ಕಾಂಬಿನೇಷನ್ನಲ್ಲಿ ಬರ್ತಿರೋ ಸಿನಿಮಾ ಭರಾಟೆ. ಈ ಭರಾಟೆ ಎನ್ನುವ ಟೈಟಲ್ನಲ್ಲೇ ಒಂದು ಸೌಂಡು ಇದೆ. ಚಿತ್ರ ಸೆಟ್ಟೇರಿದಲ್ಲಿಂದಲೂ ಸಖತ್ ಸೌಂಡು ಮಾಡುತ್ತಲೇ ಇದೆ.
ಚಂದ್ರಚಕೋರಿ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ನಟ ಶ್ರೀಮುರಳಿ. ತನ್ನ ಮೊದಲ ಚಿತ್ರವೇ ಹಿಟ್ ಆದ ಖುಷಿಯಲ್ಲಿದ್ದ ಮುರಳಿಗೆ ನಂತರದ ದಿನಗಳು ಅಷ್ಟೇನು ಖುಷಿ ಕೊಟ್ಟಿರಲಿಲ್ಲ. ಚಂದ್ರಚಕೋರಿ ನಂತರ ಬಂದ ಸಿನಿಮಾಗಳು ಹೇಳಿಕೊಳ್ಳುವಂತಹ ಸದ್ದು ಮಾಡಲಿಲ್ಲ. ಒಂದೇ ಒಂದು ಬ್ರೇಕ್ಗೆ ಕಾದಿದ್ದ ಶ್ರೀಮುರಳಿಗೆ 2014 ಅದೃಷ್ಟದ ವರ್ಷವಾಯ್ತು. 2014ರಲ್ಲಿ ತೆರೆಕಂಡ ಉಗ್ರಂ ಮುರಳಿಗೆ ದೊಡ್ಡಮಟ್ಟಿನ ಯಶಸ್ಸು ತಂದುಕೊಟ್ಟಿತು. ಪ್ರಶಾಂತ್ ನೀಲ್ ತಾವು ನಿರ್ದೇಶಿಸಿದ ಮೊದಲ ಚಿತ್ರದಲ್ಲಿಯೇ ಗೆದ್ದರು. ತಮ್ಮ ಸಂಬಂಧಿ ಮುರಳಿ ಅವರನ್ನು ಯಶಸ್ವಿನ ಹಳಿಗೆ ತಂದರು.
ಉಗ್ರಂ ಬಳಿಕ ಮುರಳಿ ಹಿಂತಿರಿ ನೋಡಿಲ್ಲ. 2015ರಲ್ಲಿ ತೆರೆಕಂಡ ರಥಾವರ, 2017ರಲ್ಲಿ ಬಂದ ಮಫ್ತಿ ಕೂಡ ಸೂಪರ್ ಹಿಟ್ ಆದವು. ಇದರೊಂದಿಗೆ ಹ್ಯಾಟ್ರಿಕ್ ಗೆಲುವಿನ ಸಿಹಿ ಉಂಡ ಮುರಳಿ ಮೇಲೆ ಜವಬ್ದಾರಿಯೂ ಹೆಚ್ಚಿತು. ಕಥೆ ಆಯ್ಕೆಯಲ್ಲಿ, ಪಾತ್ರದ ವಿಚಾರದಲ್ಲಿ ಅವರು ತುಂಬಾ ಚೂಸಿ ಆಗಿದ್ದಾರೆ.
ಸದ್ಯ ಭರಾಟೆಯಲ್ಲಿ ಬ್ಯುಸಿ ಇದ್ದಾರೆ. ಚೇತನ್ ನಿರ್ದೇಶನದ ಭರಾಟೆ ಚಿತ್ರದ ಚಿತ್ರೀಕರಣ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಇನ್ನು ಎರಡೇ ಎರಡು ಹಾಡುಗಳ ಶೂಟಿಂಗ್ ಮಾತ್ರ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಬೆಂಗಳೂರು, ರಾಜಸ್ಥಾನ್, ಹೈದರಾಬಾದ್ ಒಳಗೊಂಡಂತೆ ಅನೇಕ ಕಡೆಗಳಲ್ಲಿ ಭರಾಟೆ ಚಿತ್ರೀಕರಣ ನಡೆದಿದೆ. ಇನ್ನು ಎರಡು ಹಾಡುಗಳು ಮುಗಿದರೆ ಚಿತ್ರೀಕರಣ ಕಂಪ್ಲೀಟ್ ಆದಂತೆ. ಆ ಎರಡು ಹಾಡುಗಳನ್ನು ವಿದೇಶಗಳಲ್ಲಿ ಚಿತ್ರೀಕರಿಸುವ ಪ್ಲಾನ್ ಚಿತ್ರತಂಡದ್ದಾಗಿದೆ.
ಈಗಾಗಲೇ ಪೋಸ್ಟರ್, ಟೀಸರ್ನಿಂದ ಭರಾಟೆ ಕಾರುಬಾರು ಜೋರಾಗಿದೆ. ಶೀಘ್ರದಲ್ಲೇ ರಿಲೀಸ್ ಡೇಟ್ ಅನ್ನು ಚಿತ್ರತಂಡ ಅನೌನ್ಸ್ ಮಾಡಲಿದೆ.
ಶ್ರೀಮುರಳಿಗೆ ಜೋಡಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ಸಾಯಿಕುಮಾರ್ ಹಾಗೂ ಅವರ ಸಹೋದರ ರವಿಶಂಕರ್ ಇಬ್ಬರೂ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿರುವುದು ಚಿತ್ರದ ಮತ್ತೊಂದು ವಿಶೇಷ.
ಭರಾಟೆ ಬಳಿಕ ಮುರಳಿ ಮದಗಜ ಮತ್ತು ಉಗ್ರಂ ವೀರಂನಲ್ಲಿ ಬ್ಯುಸಿ ಆಗಲಿದ್ದಾರೆ. ಸದ್ಯ ಅಭಿಮಾನಿಗಳಿಗೆ ಭರಾಟೆ ಹಬ್ಬ ಉಣಬಡಿಸಲು ತಯಾರಿ ನಡೆಸಿದ್ದಾರೆ.