ಶಾಸಕರ ರಾಜೀನಾಮೆಯಿಂದಾಗಿ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಶ್ವಾಸ ಮತ ಯಾಚಿಸುವುದಾಗಿ ಹೇಳಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಸರ್ಕಾರ ಉಳಿಯುವುದು ಅಸಾಧ್ಯ ಎನ್ನಲಾಗುತ್ತಿದೆ.
ಮೈತ್ರಿ ಸರ್ಕಾರ ಪತನಗೊಂಡರೆ ಹೊಸ ಸರ್ಕಾರ ರಚನೆಗೆ ಬಿಜೆಪಿ ತುದಿಗಾಲಲ್ಲಿ ನಿಂತಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇನ್ನು ಕೆಲ ಸ್ಥಾನಗಳನ್ನು ಗಳಿಸಿದ್ದರೆ ಈ ಮೊದಲೇ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದರಾದರೂ ಅದು ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಕೈಗೂಡಿಸಿದ ಕಾರಣ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದರು.
ಯಡಿಯೂರಪ್ಪ ಈ ಬಾರಿ ಪ್ರಮಾಣವಚನ ಸ್ವೀಕರಿಸಿದರೆ ಒಟ್ಟು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದಂತಾಗುತ್ತದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರಾದರೂ ಕಡೆಗಳಿಗೆಯಲ್ಲಿ ಜೆಡಿಎಸ್ ಕೈಕೊಟ್ಟ ಕಾರಣ ಸ್ಥಾನ ಕಳೆದುಕೊಳ್ಳಬೇಕಾಯಿತು.
ಆ ಬಳಿಕ ನಡೆದ ಚುನಾವಣೆಯಲ್ಲಿ ಜೆಡಿಎಸ್ ವಿಶ್ವಾಸದ್ರೋಹವನ್ನೇ ಮುಂದಿಟ್ಟುಕೊಂಡು ಮತ ಯಾಚಿಸಿದ್ದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಯಡಿಯೂರಪ್ಪನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಆದರೆ ಕೆಲ ರಾಜಕೀಯ ಬೆಳವಣಿಗೆಗಳಿಂದಾಗಿ ಯಡಿಯೂರಪ್ಪನವರು ಪೂರ್ಣಾವಧಿ ಪೂರೈಸಲಾಗಿರಲಿಲ್ಲ.