ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಸೀಸನ್ ಕೋವಿಡ್-19 ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಬಯೋ ಬಬಲ್ ಒಳಗಿದ್ದ ಐಪಿಎಲ್ 4 ಫ್ರಾಂಚೈಸಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 14ನೇ ಆವೃತ್ತಿಯ ಐಪಿಎಲ್ ಅನ್ನು ಅರ್ಧಕ್ಕೆ ನಿಲ್ಲಿಸಿತ್ತು. ನಿಲ್ಲಿಸಲ್ಪಟ್ಟಿದ್ದ ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮುಂದುವರೆಯಲಿದೆ.
ಮಂಗಳವಾರ ಪಿಟಿಐಗೆ ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಗಳು ಐಪಿಎಲ್ ಯುಎಇಯಲ್ಲಿ ನಡೆಯುತ್ತಿರುವುದನ್ನು ಖಾತರಿಪಡಿಸಿದ್ದಾರೆ. ಸೆಪ್ಟೆಂಬರ್ ಮೂರನೇ ವಾರದಲ್ಲಿ ಐಪಿಎಲ್ ಆರಂಭಗೊಳ್ಳಲಿರುವುದಾಗಿ ಮಾಹಿತಿ ಲಭ್ಯವಾಗಿದೆ.
ನಿಲುಗಡೆಯಾಗಿರುವ ಐಪಿಎಲ್ 14ನೇ ಆವೃತ್ತಿ ಯುಎಇಯಲ್ಲಿ ಸೆಪ್ಟೆಂಬರ್ 18 ಅಥವಾ 19ಕ್ಕೆ ಆರಂಭಗೊಳ್ಳಲಿದೆ. ಮೂರು ವಾರಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 10 ಡಬಲ್ ಹೆಡರ್ ಪಂದ್ಯಗಳಿರಲಿವೆ ಎಂದು ಹೇಳಲಾಗುತ್ತಿದೆ. ಫೈನಲ್ ಪಂದ್ಯ ಅಕ್ಟೋಬರ್ 9 ಅಥವಾ 10ಕ್ಕೆ ನಡೆಯಲಿದೆ.