‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಸಲುವಾಗಿ ಯಶ್ ಅವರು ನಾಲ್ಕೈದು ವರ್ಷ ಮೀಸಲಿಟ್ಟರು. ಅದಕ್ಕೆ ತಕ್ಕ ಪ್ರತಿಫಲ ಅವರಿಗೆ ಸಿಕ್ಕಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ಯಶ್ ಜೊತೆ ಸಿನಿಮಾ ಮಾಡಲು ಪುರಿ ಜಗನ್ನಾಥ್, ಶಂಕರ್ ಮುಂತಾದ ಸ್ಟಾರ್ ನಿರ್ದೇಶಕರು ಕಾದಿದ್ದಾರೆ. ಕನ್ನಡದ ನಿರ್ದೇಶಕ ನರ್ತನ್ ಜೊತೆ ಕೂಡ ಯಶ್ ಸಿನಿಮಾ ಮಾಡಬೇಕಿದೆ. ಆದರೆ ಈ ಮೂವರಲ್ಲಿ ಮೊದಲು ಯಾರ ಜೊತೆಗಿನ ಸಿನಿಮಾ ಸೆಟ್ಟೇರಲಿದೆ ಎಂಬುದು ಈಗ ಎದುರಾಗಿರುವ ಪ್ರಶ್ನೆ.
ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರು ಮಾಡಿದ್ದಾರೆ. #Yash19 ಎಂದು ಹ್ಯಾಶ್‌ಟ್ಯಾಗ್ ಬಳಸುವ ಮೂಲಕ ಟ್ರೆಂಡ್ ಮಾಡಲಾಗುತ್ತಿದೆ. ಯಶ್ ನಟಿಸಲಿರುವ ಮುಂದಿನ ಸಿನಿಮಾವು ‘ಮಫ್ತಿ’ ಖ್ಯಾತಿಯ ನಿರ್ದೇಶಕ ನರ್ತನ್ ಜೊತೆ ಎಂದು ಹೇಳಲಾಗುತ್ತಿದೆ. ಇದೊಂದು ಆ್ಯಕ್ಷನ್ ಪ್ರಧಾನ ಸಿನಿಮಾ ಆಗಲಿದ್ದು ದೊಡ್ಡ ಬಜೆಟ್‌ನಲ್ಲಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ.
ಯಶ್ ಜೊತೆ ನರ್ತನ್ ಮಾಡಲಿರುವ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ. ಅದಕ್ಕಾಗಿ ‘ರಾಕಿಂಗ್ ಸ್ಟಾರ್’ ಫ್ಯಾನ್ಸ್ ಕಾದಿದ್ದಾರೆ. ಶಿವರಾಜ್‌ಕುಮಾರ್ ಮತ್ತು ಶ್ರೀಮುರಳಿ ಮುಖ್ಯಭೂಮಿಕೆ ನಿಭಾಯಿಸಿದ್ದ ‘ಮಫ್ತಿ’ ಚಿತ್ರವನ್ನು ನರ್ತನ್ ಅವರು ಸಖತ್ ಮಾಸ್ ಆಗಿ ಕಟ್ಟಿಕೊಟ್ಟಿದ್ದರು. ಆ ಮೂಲಕ ಅವರು ಸ್ಯಾಂಡಲ್‌ವುಡ್‌ನಲ್ಲಿ ಭರವಸೆಯ ನಿರ್ದೇಶಕನಾಗಿ ಹೊರಹೊಮ್ಮಿದರು.
‘ಮಫ್ತಿ’ ಚಿತ್ರದಿಂದ ದೊಡ್ಡ ಯಶಸ್ಸು ಸಿಕ್ಕರೂ ಕೂಡ ನಿರ್ದೇಶಕ ನರ್ತನ್ ಅವರು ಬೇರೆ ಯಾವುದೇ ಸಿನಿಮಾವನ್ನೂ ಶುರು ಮಾಡಿಲ್ಲ. ಮತ್ತೊಂದು ದೊಡ್ಡ ಸಿನಿಮಾ ಮೂಲಕವೇ ಅವರು ಧೂಳೆಬ್ಬಿಸಲು ಕಾದಿದ್ದಾರೆ. ಯಶ್ ಜೊತೆ ಅವರು ಕೈ ಜೋಡಿಸಿದ್ದೇ ಹೌದಾದರೆ ಆ ಪ್ರಾಜೆಕ್ಟ್ ಅವರ ಪಾಲಿಗೆ ದೊಡ್ಡ ಮೈಲೇಜ್ ನೀಡಲಿದೆ.