ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಕಡೆಯಿಂದ ಮತ್ತೊಂದು ಭರ್ಜರಿ ಸುದ್ದಿ ಹೊರಬಿದ್ದಿದೆ. ಈಗಾಗಲೇ ದಕ್ಷಿಣ ಅನೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಮತ್ತೋರ್ವ ಸ್ಟಾರ್ ನಟನ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಹೌದು ಆ ಸ್ಟಾರ್ ನಟ ಮತ್ಯಾರು ಅಲ್ಲ ಮಲಯಾಳಂನ ಖ್ಯಾತ ನಟ ದುಲ್ಕರ್ ಸಲ್ಮಾನ್.
ದುಲ್ಕರ್ ಸಲ್ಮಾನ್ ಇತ್ತೀಚಿಗಷ್ಟೆ ತೆಲುಗು ಸಿನಿಮಾ ಅನೌನ್ಸ್ ಮಾಡಿದ್ದರು. ಇನ್ನು ಹೆಸರಿಡದ ಈ ಸಿನಿಮಾದಲ್ಲಿ ದುಲ್ಕರ್ ಗೆ ನಾಯಕಿಯಾಗಿ ಬಾಲಿವುಡ್ ನ ಖ್ಯಾತ ನಟಿ ಮೃಣಾಲ್ ಠಾಕೂರ್ ಆಯ್ಕೆಯಾಗಿದ್ದರು. ಇದೊಂದು ರೊಮ್ಯಾಂಟಿಕ್ ಸಿನಿಮಾವಾಗಿದ್ದು ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಲಾಗಿದೆ. ಅಂದಹಾಗೆ ದುಲ್ಕರ್ ಹುಟ್ಟುಹಬ್ಬ ದಿನ ಮೊದಲ ಲುಕ್ ಕೂಡ ಬಿಡುಗಡೆ ಮಾಡಲಾಗಿದೆ. ಸೈಕಲ್ ಹಿಂದೆ ದುಲ್ಕರ್ ಕ್ಯಾಮರಾಗೆ ಮುಖಮಾಡಿ ಕುಳಿತಿರುವ ಲುಕ್ ಅಭಿಮಾನಿಗಳ ಗಮನಸೆಳೆದಿತ್ತು.
ಅಂದಹಾಗೆ ಮಲಯಾಳಂ ಮಾತ್ರವಲ್ಲದೇ ದೇಶದಾದ್ಯಂತ ಅಪಾರ ಸಂಖ್ಯೆ ಅಭಿಮಾನಿ ಬಳಗಹೊಂದಿರುವ ನಟ ದುಲ್ಕರ್. ಮಲಯಾಳಂ ಸ್ಟಾರ್ ನಟನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಈಗಾಗಲೇ ಹಿಂದಿಯಲ್ಲಿ ಮಿಂಚಿರುವ ದುಲ್ಕರ್ ಇದೀಗ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದುಲ್ಕರ್ ಸಿನಿಮಾಗೆ ರಶ್ಮಿಕಾ ಎಂಟ್ರಿ ಕೊಟ್ಟಿರುವುದು ಮತ್ತಷ್ಟು ಕುತೂಹಲ, ನಿರೀಕ್ಷೆ ಹೆಚ್ಚಾಗಿದೆ.
ಚಿತ್ರದಲ್ಲಿ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈಗಾಗಲೇ ರಶ್ಮಿಕಾ ಜೊತೆ ಚಿತ್ರತಂಡ ಮಾತುಕತೆ ನಡೆಸಿದ್ದು, ರಶ್ಮಿಕಾ ಕೂಡ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ರಶ್ಮಿಕಾ ಎಂಟ್ರಿ ಚಿತ್ರತಂಡದ ಸಂತಸ ಹೆಚ್ಚಿಸಿದದೆ. ಜೊತೆಗೆ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಸದ್ಯ ಚಿತ್ರೀಕರಣ ಹೈದರಾಬಾದ್ ಮತ್ತು ಕಾಶ್ಮೀರ ಸೇರಿದಂತೆ ಬಹುತೇಕ ಕಡೆ ನಡೆದಿದೆ. ಸದ್ಯ ಸಿನಿಮಾತಂಡ ರಷ್ಯಾ ಕಡೆ ಪಯಣ ಬೆಳೆಸಲು ಪ್ಲಾನ್ ಮಾಡಿದೆ ಎನ್ನಲಾಗಿದೆ. ಅಂದಹಾಗೆ ರಶ್ಮಿಕಾ ಅವರಿಗೆ ಈ ಪಾತ್ರಕ್ಕಾಗಿ ತುಂಬಾ ಮೊದಲೇ ಆಫರ್ ಮಾಡಲಾಗಿತ್ತಂದತೆ ಆದರೆ ಡೇಟ್ ಸಮಸ್ಯೆಯಿಂದ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ ಎನ್ನಲಾಗುತ್ತಿದೆ. ಇದೀಗ ದುಲ್ಕರ್ ಜೊತೆ ನಟಿಸಲು ಒಪ್ಪಿಕೊಂಡಿದ್ದಾರೆ. ದುಲ್ಕರ್ ಮತ್ತು ರಶ್ಮಿಕಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.