ಭೋರ್ಗರೆದು ಸುರಿದ ಮಳೆಯ ನಡುವೆಯೂ ಅಹೋರಾತ್ರಿ ರಾಜಧಾನಿಯಲ್ಲಿ ಹೋರಾಟಗಾರರು ಮಹದಾಯಿಗಾಗಿ ಮೂರು ದಿನಗಳ ಕಾಲ ಹೋರಾಟ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯಪಾಲರು ಕನಿಷ್ಠ ಮನವಿ ಸ್ವೀಕರಿಸಲು ಅವಕಾಶವನ್ನೂ ನೀಡಲಿಲ್ಲ ಎಂದು ಕುಡಿಯುವ ನೀರಿಗಾಗಿ ಜನರು ಕಣ್ಣೀರಿಟ್ಟಿದ್ದರು.

ಕಳಸಾ ಬಂಡೂರಿ ಯೋಜನೆ ಅಧಿಸೂಚನೆಗೆ ಒತ್ತಾಯಿಸಿ ರಾಜ್ಯಪಾಲರ ಭೇಟಿಗೆ ಆಗ್ರಹಿಸಿದ್ದರು.ಆದರೆ, ರಾಜ್ಯಪಾಲರು ಭೇಟಿ ನಿರಾಕರಣೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ. ಮೂರು ದಿನಗಳಿಂದ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈತರು ನಡೆಸುತ್ತಿರುವ ಹೋರಾಟದ ಗೋಳು ಕೇಳುವವರೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆ, ಚಳಿ ಎನ್ನದೆ ಅಹೋರಾತ್ರಿ ಹೋರಾಟ ನಡೆಸುತ್ತಿದ್ದು, ಮೂವರು ರೈತ ಮಹಿಳೆಯರು ತೀವ್ರ ಜ್ವರದಿಂದ ಅಸ್ವಸ್ಥರಾಗಿ ಅವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.






