ಅತೃಪ್ತ ಶಾಸಕರ ಸರಣಿ ರಾಜೀನಾಮೆಯಿಂದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸರ್ಕಾರ ಈಗಾಗಲೇ ಬಹುಮತ ಕಳೆದುಕೊಂಡಿದ್ದು, ಸ್ಪೀಕರ್ ಹಾಗೂ ಸುಪ್ರೀಂ ಕೋರ್ಟ್ ಕಾರಣಕ್ಕೆ ಸದ್ಯ ಐಸಿಯುನಲ್ಲಿದೆ.
ಇದರ ಮಧ್ಯೆ ಶಾಸಕರನ್ನು ಸೆಳೆಯಲು ಕಾಂಗ್ರೆಸ್ – ಜೆಡಿಎಸ್ ನಾಯಕರು ಸತತ ಯತ್ನ ನಡೆಸುತ್ತಿದ್ದರೆ ಅತ್ತ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಮೈತ್ರಿಕೂಟ ಸರಕಾರದ ಉಳಿವಿಗೆ ಪ್ರಾರ್ಥಿಸಿ ದೇವರ ಮೊರೆ ಹೋಗಿದ್ದಾರೆ. ಈ ಸರ್ಕಾರ ಬಂದಿರುವುದೇ ದೇವರ ಅನುಗ್ರಹದಿಂದ ಎಂದು ಬಲವಾಗಿ ನಂಬಿರುವ ರೇವಣ್ಣ ಆತನೇ ಸರ್ಕಾರವನ್ನು ಕಾಯುತ್ತಾನೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ.
ಈಗಾಗಲೇ ಶೃಂಗೇರಿ ಶಾರದಾಂಬೆ, ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದ ಹೆಚ್.ಡಿ.ರೇವಣ್ಣ ಭಾನುವಾರದಂದು ಕೊಲ್ಲೂರು ಮೂಕಾಂಬಿಕೆ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಾಗೂ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದಿದ್ದಾರೆ.
ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಿಯ ಸನ್ನಿಧಾನಕ್ಕೆ ರೇವಣ್ಣ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳು ಅವರ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಲು ಮುಂದಾಗಿದ್ದು, ಈ ವೇಳೆ ಕೆಂಡಾಮಂಡಲಗೊಂಡ ರೇವಣ್ಣ ಅವರುಗಳ ವಿರುದ್ಧ ಹರಿಹಾಯ್ದರಲ್ಲದೆ ಮಾಧ್ಯಮ ಪ್ರತಿನಿಧಿಗಳು ಚಿತ್ರೀಕರಿಸಿದ ದೃಶ್ಯಗಳನ್ನು ಅಳಿಸಿ ಹಾಕಲು ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ.