ಹಿಂದಿ ಕಿರುತೆರೆಯಲ್ಲಿ ರಾವಣನಾಗಿ ಹೆಸರು ಮಾಡಿದ ಕನ್ನಡದ ನಟ ಜೆಕೆ ಈಗ ಬಾಲಿವುಡ್ ಬಯೋಪಿಕ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಭಾರತದ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಿಥಾಲಿ ರಾಜ್ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರ ಇದು. ‘ಶಬಾಶ್ ಮಿಥು’ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.
ಬಾಲಿವುಡ್‌ನ ಜನಪ್ರಿಯ ನಟಿ ತಾಪ್ಸಿ ಪನ್ನು ಮಿಥಾಲಿ ರಾಜ್ ಪಾತ್ರದಲ್ಲಿ ನಟಿಸುತ್ತಿದ್ದು, ಜೆಕೆ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಪಾತ್ರ ಏನು ಎನ್ನುವುದನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಚಿತ್ರ ತಮಗೆ ಬ್ರೇಕ್ ನೀಡಬಹುದೆಂಬ ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಜೆಕೆ ಹೇಳಿದ್ದಾರೆ.
‘ಈ ಚಿತ್ರದಲ್ಲಿ ಬಹಳ ಪ್ರಮುಖ ರೋಲ್ ನನ್ನದು. ಇದನ್ನು ವಿಶೇಷವಾಗಿ ಪ್ರಕಟಿಸಬೇಕೆಂದಿದ್ದಾರೆ. ಹಾಗಾಗಿ ಈಗಲೇ ನಾನು ಪಾತ್ರದ ಬಗ್ಗೆ ವಿವರ ನೀಡುವಂತಿಲ್ಲ. ಇದು ಬಯೋಪಿಕ್ ಅನ್ನೋದು, ಅದರಲ್ಲೂ ಭಾರತದ ಮಹಿಳಾ ಕ್ರಿಕೆಟ್ ಕ್ಯಾಪ್ಟನ್ ಜೀವನದ ಸ್ಟೋರಿ ಅನ್ನೋದು ನನಗೆ ಖುಷಿ ಕೊಟ್ಟಿದೆ’ ಎಂದಿದ್ದಾರೆ. ಬಾಲಿವುಡ್ ನಿರ್ದೇಶಕ ರಾಹುಲ್ ಧೋಲಕಿಯಾ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ.
ಈ ಮೊದಲು ಇವರು ಶಾರುಖ್ ಖಾನ್ ನಟನೆಯ ‘ರಯೀಸ್’ ಚಿತ್ರ ನಿರ್ದೇಶನ ಮಾಡಿದ್ದರು. ‘ದೊಡ್ಡ ನಿರ್ದೇಶಕರು, ತಂತ್ರಜ್ಞರು ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಇವರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ. ಈಗಾಗಲೇ ಮೊದಲ ಶೆಡ್ಯೂಲ್ ಚಿತ್ರೀಕರಣ ಮಾಡಲಾಗಿದೆ. ನನ್ನ ಭಾಗದ ಶೂಟಿಂಗ್ ಶುರುವಾಗಬೇಕಿತ್ತು. ಲಾಕ್‌ಡೌನ್ ಆಗಿದ್ದರಿಂದ ಹೋಗಲಾಗಲಿಲ್ಲ. ಲಾಕ್‌ಡೌನ್ ತೆರವಾದ ತಕ್ಷಣ ಚಿತ್ರೀಕರಣ ಶುರುವಾಗಲಿದೆ’ ಎಂದಿದ್ದಾರೆ.
ಮಿಥಾಲಿ ರಾಜ್ ಅದ್ಭುತ ಬ್ಯಾಟ್ಸ್‌ಮನ್ ಆಗಿದ್ದು, 6 ಸಾವಿರ ರನ್ ಗಳಿಸಿರುವ ಏಕೈಕ ಮಹಿಳೆಯಾಗಿದ್ದಾರೆ. 2005 ಮತ್ತು 2017ರಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿ ಮುನ್ನಡೆಸಿದ್ದರು. ಜೆಕೆ ಈ ಮೊದಲು ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿ ತೆರೆಕಂಡ ‘ಓ ಪುಷ್ಪಾ ಐ ಹೇಟ್ ಟಿಯರ್ಸ್’ ಎಂಬ ಬಹುಭಾಷಾ ಚಿತ್ರದಲ್ಲಿ ನಟಿಸಿದ್ದಾರೆ.