ಹದಿಹರೆಯದಲ್ಲಿ ದೇಹದಲ್ಲಿ ರಸದೂತಗಳ ಸ್ರವಿಸುವಿಕೆಯಲ್ಲಿ ಆಗುವ ವ್ಯತ್ಯಾಸದಿಂದ ಮೊಡವೆಗಳು ಕಾಣಿಸಿಕೊಳ್ಳ ಬಹುದು. ಸ್ವಚ್ಛತೆಯ ಕಡೆಗೆ ಗಮನ ಕೊಡದಿರುವುದರಿಂದ, ‘ಎ’ ಜೀವಸತ್ವದ ಕೊರತೆಯಿಂದಲೂ ಕಂಡುಬರುತ್ತವೆ. ಋತುಸ್ರಾವದ ದಿನಗಳಲ್ಲಿ ಮೊಡವೆ ಕಾಣಿಸಿಕೊಳ್ಳುವುದು ಅಧಿಕ.
ಇದಕ್ಕೆ ಮೊಡೆವೆಗಳು ಮೂಡದಂತೆ ಕಾಳಜಿ ವಹಿಸಬೇಕು. ಅದಕ್ಕೆ ಮುಖ್ಯವಾಗಿ ನಮ್ಮ ಡಯೆಟ್ ಸರಿಯಾಗಿರಬೇಕು. ನಾವು ಸೇವಿಸುವ ಆಹಾರವೂ ಮೊಡವೆಗಳು ಮೂಡಲು ಕಾರಣವಾಗಬಲ್ಲದು. ಮೊಡವೆಗಳ ಕಲೆಯನ್ನು ಹೋಗಲಾಡಿಸಲು ನಾವಿಂದು ಕೆಲವು ಸಿಂಪಲ್ ಮನೆಮದ್ದನ್ನು ತಿಳಿಸಲಿದ್ದೇವೆ. ಇದನ್ನು ನೀವು ನಿಯಮಿತವಾಗಿ ಅನುಸರಿಸಿದರೆ ನಿಮ್ಮ ಮೊಡವೆ ಕಲೆಗಳಿಗೆ ಬಾಯ್ ಬಾಯ್ ಹೇಳಬಹುದು.
ನಿಂಬೆಹಣ್ಣು
ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಇರುವುದರಿಂದ ನಿಂಬೆಹಣ್ಣಿನ ರಸವನ್ನು ಮುಖದಲ್ಲಿನ ಕಲೆಗಳ ನಿವಾರಣೆಗೆ ಬಳಸಬಹುದು. ಇದು ಮುಖದಲ್ಲಿನ ಕಲೆಗಳನ್ನು ಮಂದಗೊಳಿಸುತ್ತದೆ. ನೀವು ಇದನ್ನು ಇತರ ಫೇಸ್‌ಪ್ಯಾಕ್‌ಗಳ ಜೊತೆಯಲ್ಲೂ ಬಳಸಬಹುದು.
ಅರಶಿನ
ಸಾಮಾನ್ಯವಾಗಿ ಹಳೆಕಾಲದಿಂದಲೂ ಅರಶಿನವನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತಿದೆ. ಇದರಲ್ಲಿನ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಗಾಯಗಳನ್ನು ಹಾಗೂ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಅರಶಿನವು ಬರೀ ಚರ್ಮವನ್ನು ಹೊರಗಿನಿಂದ ಮಾತ್ರವಲ್ಲ ಒಳಗಿನಿಂದಲೂ ಆರೋಗ್ಯವಾಗಿರಿಸುತ್ತದೆ. ಜೊತೆಗೆ ತ್ವಚೆಯನ್ನು ಹೊಳಪಾಗಿಸುತ್ತದೆ.
ಕಡಲೆಹಿಟ್ಟು
ಅತ್ಯಂತ ಸುಲಭವಾಗಿ ಲಭ್ಯವಿರುವ ಪದಾರ್ಥಗಳಲ್ಲಿ ಕಡಲೆಹಿಟ್ಟು ಕೂಡಾ ಒಂದು. ಕಡಲೆಹಿಟ್ಟಿನಲ್ಲಿ ಸ್ನಾನ ಮಾಡುವುದನ್ನು ನೀವು ಕೇಳಿರಬಹುದು. ಇದು ಚರ್ಮದ ತೊಂದರೆಗಳಿಗೆ ಸೂಕ್ತವಾಗಿ ಬರುತ್ತದೆ. ಮೊಡವೆಗಳ ಗುರುತುಗಳನ್ನು ತೆಗೆದುಹಾಕಲು ಅಥವಾ ಮುಖದ ಸ್ಕ್ರಬ್ ಆಗಿ ಬಳಸಲೂ ಬಹುದು, ಕಡಲೆ ಹಿಟ್ಟು ಕ್ಷಾರೀಯ ಗುಣಗಳಿಂದ ತುಂಬಿರುತ್ತದೆ ಮತ್ತು ಚರ್ಮದ pH ಸಮತೋಲನವನ್ನು ಕಾಪಾಡಿಕೊಳ್ಳಲು ಇದನ್ನು ಬಹಳ ಹಿಂದಿನಿಂದಲೂ ತ್ವಚೆಯ ಕ್ಲೆನ್ಸರ್ ಆಗಿ ಬಳಸಲಾಗುತ್ತದೆ.
ಆಲೂಗಡ್ಡೆ
ವಿಟಮಿನ್ ಹಾಗೂ ಮಿನರಲ್‌ಗಳಿಂದ ಸಮೃದ್ಧವಾಗಿರುವ ಆಲೂಗಡ್ಡೆಯು ಮೊಡವೆಗಳು ಹಾಗೂ ಮೊಡವೆ ಕಲೆಗಳನ್ನು ಹೋಗಲಾಡಿಸಲು ಉಪಕಾರಿಯಾಗಿದೆ. ಇದು ನಿಮ್ಮನ್ನು ಮತ್ತೆ ನಿಮ್ಮ ಸಹಜ ಸೌಂದರ್ಯಕ್ಕೆ ಮರಳಿಸುತ್ತದೆ. ನೀವು ಆಲೂಗಡ್ಡೆಯನ್ನು ಕಟ್ ಮಾಡಿ ಕಲೆಗಳಿರುವ ಜಾಗಕ್ಕೆ ಉಜ್ಜಬಹುದು ಇಲ್ಲವಾದೆ ಆಲೂಗಡ್ಡೆಯ ಜ್ಯೂಸ್‌ನ್ನು ಹಚ್ಚಬಹುದು.
ಅಲೋವೆರಾ
ಕಲೆರಹಿತ ನೈಸರ್ಗಿಕವಾಗಿ ಹೊಳೆಯುವ ಚರ್ಮಕ್ಕಾಗಿ, ಅಲೋವೆರಾ ಪರಿಪೂರ್ಣ ಪರಿಹಾರವಾಗಿದೆ. ಅದರ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಂದಾಗಿ ಚರ್ಮದಲ್ಲಿನ, ಮೊಡವೆ ಗುರುತುಗಳು ಮತ್ತು ಸೋಂಕುಗಳಂತಹ ಚರ್ಮದ ತೊಂದರೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಚರ್ಮದಲ್ಲಿನ ಮೊಡವೆ ಕಲೆಗಳು ಮಾತ್ರವಲ್ಲ ಗಾಯದ ಕಲೆಗಳನ್ನೂ ನಿವಾರಿಸುತ್ತದೆ.
ಕಿತ್ತಳೆಹಣ್ಣಿನ ಸಿಪ್ಪೆಯ ಪೌಡರ್
ಕಿತ್ತಳೆಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಳ್ಳಿ. ಕಿತ್ತಳೆ ಸಿಪ್ಪೆಯಲ್ಲಿರುವ ಸಿಟ್ರಿಕ್ ಆಸಿಡ್ ನಿಮ್ಮ ಮುಖದ ಮೇಲಿರುವ ಕಲೆಯನ್ನು ಕಡಿಮೆ ಮಾಡುವಲ್ಲಿ ಸಹಕರಿಸಬಲ್ಲದು. ಈ ಪುಡಿಗೆ ಸ್ವಲ್ಪ ರೋಸ್ ವಾಟರ್ ಸೇರಿಸಿ ಪೇಸ್ಟ್ ರೀತಿ ತಯಾರಿಸಿ ಇದನ್ನು ಮೊಡವೆ ಕಲೆಳಿರುವ ಜಾಗಕ್ಕೆ ಹಚ್ಚುತ್ತಿರಿ.