ಜೂನ್ 12, 2021ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಇದ್ದಷ್ಟು ದಿನ ವಿಧ ವಿಧವಾದ ಪಾತ್ರಗಳನ್ನು ಮಾಡಿ ಗಮನಸೆಳೆದು, ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದ ಅವರು ‘ಮೇಲೊಬ್ಬ ಮಾಯಾವಿ’ ಸಿನಿಮಾದಲ್ಲಿಯೂ ಕೂಡ ಅಭಿನಯಕ್ಕೆ ಒತ್ತು ನೀಡುವ ಪಾತ್ರ ಮಾಡಿದ್ದಾರೆ. ಈ ಚಿತ್ರದ ಶೂಟಿಂಗ್ ಮಾಡುವಾಗಿನ ಅನುಭವವನ್ನು ನಿರ್ದೇಶಕ ಬಿ.ನವೀನ್ ಕೃಷ್ಣ ಹಂಚಿಕೊಂಡಿದ್ದಾರೆ.
ʻಮೇಲೊಬ್ಬ ಮಾಯಾವಿʼ ನನ್ನ ನಿಮ್ಮ ಜೊತೆಯಾಗಿಸಿತು. ಒಂದೇ ಸಿನಿಮಾದ ಒಡನಾಟದಲ್ಲಿ ಒಡಹುಟ್ಟಿದವರಿಗಿಂತ ಹತ್ತಿರವಾದ್ರಿ. ಯಾರಲ್ಲೂ ಹಂಚಿಕೊಳ್ಳಲಾಗದ, ಹಂಚಿಕೊಳ್ಳಬಾರದ ಸಂಕಟಗಳನ್ನು ಮಗುವಿನಂತೆ ಹಂಚಿಕೊಂಡ್ರಿ. ನಾನೊಬ್ಬ ನಿರ್ದೇಶಕ, ನೀವೊಬ್ಬ ಕಲಾವಿದ ಅನ್ನುವ ಕೊಂಡಿಯನ್ನು ಬಹುಬೇಕ ಕಳಚಿದ್ರಿ. ಸದಾ ಹೊಸತನ್ನು ಯೋಚಿಸುವ.. ಸದಾ ಸಂತೋಷವನ್ನು ಹಂಚುವ.. ಎಲ್ಲರಿಗೂ ಒಳ್ಳೆಯದನ್ನು ಬಯಸುವ ನಿಮ್ಮ ಜೀವನ ಸೂತ್ರವನ್ನು ಇಡೀ ತಂಡಕ್ಕೆ ಉಚಿತವಾಗಿ ಹಂಚಿದಿರಿ.
ಊಟವನ್ನು ಇಷ್ಟ ಪಡುವ ನೀವು… ಸಾಕಷ್ಟು ಬಾರಿ ಕೈತುತ್ತು ಕೊಟ್ರಿ… ನಿಮ್ಮ ನಟನೆಯ ಸ್ಕಿಲ್ ಅನ್ನು ಯಾವುದೇ ಆಮಿಷವಿಲ್ಲದೇ ಹಂಚಿದಿರಿ… ಇವತ್ತು ರಿಲೀಸ್ ಆಗಿರುವ ವಿಡಿಯೋ ಸಾಂಗ್ ಅನ್ನು ಆಗಾಗ ʻʻಡೈರೆಕ್ಟ್ರೆ ಬೇಗ ರಿಲೀಸ್ ಮಾಡಿ ಅಂದ್ರಿʼʼ… ಈ ಸಮಯದಲ್ಲಿ ರಿಲೀಸ್ ಮಾಡುವ ಮನಸ್ಥಿತಿ ನಮ್ಮದಲ್ಲ.. ಇಡೀ ತಂಡ ದಿಗ್ಭ್ರಮೆಯಲ್ಲಿದೆ. ಆದರೂ ರಿಲೀಸ್ ಮಾಡಿರೋದು ನಮ್ಮ ತಂಡದ ಜೊತೆ ನೀವೂ ಕೂತು ನೋಡ್ತಿದ್ದೀರಿ ಅನ್ನೋ ಉದ್ದೇಶಕ್ಕೆ…
ʻʻವಿಜಿ ಸರ್.. ಗುಂಡಿ ತೋಡಿ ಹೂಳುವ ಸೀಕ್ವೆನ್ಸ್ ಮಾಡ್ತೀರಾ… ಒಪ್ಪಿಗೇನಾ?ʼʼ ಅಂದಿದ್ದಕ್ಕೆ.. ʻʻಒಂದಲ್ಲಾ ಒಂದಿನಾ ಮಲ್ಕೋಬೇಕಾಲ್ಲಾ…ʼʼ ಅಂತ ನಗ್ತಾ ಹೇಳಿದ್ರಿ.. ಆದರೀಗ!! ಸರ್…, ಈ ಸಾಂಗ್ ಬಗ್ಗೆ ನಾನು ಚಂದ್ರಣ್ಣ ( ಚಕ್ರವರ್ತಿ ಸರ್) ಸಾಕಷ್ಟು ಚರ್ಚೆ ಮಾಡಿದ್ವಿ. ಚಂದ್ರಣ್ಣ ನಾನು ಕೊಟ್ಟ ಇನ್ಪುಟ್ಸ್ ಅನ್ನು ತುಂಬಾ ಸೀರಿಯಸ್ ಆಗಿ ತಗೊಂಡು.. ನಿಮ್ಮ ಒಪ್ಪಿಗೆಯನ್ನು ಪಡೆದೇ ಶೂಟ್ ಮಾಡಲಾಯ್ತು. ಬಾಲ್ಯದ ಗೆಳೆಯ ನಿರ್ಮಾಪಕ ಪುತ್ತೂರು ಭರತ್ ಯಾವುದಕ್ಕೂ ನೋ ಅಂದಿಲ್ಲ. ಎಲ್ಲಾ ರಿಸ್ಕ್‌ಗಳನ್ನೂ ತನ್ನ ಹೆಗಲ ಮೇಲೆ ಹೊತ್ತು ನಡೆದ್ರೂ.. ಈ ಕ್ಷಣಕ್ಕೂ..
ಕೊನೆಯದಾಗಿ , ವಿಜಿ ಸರ್ ನಿಮ್ಮ ಫೋಟೋ ಹಾಕಿ ʻರಿಪ್ʼ ಅನ್ನೊಲ್ಲ.. ನಮ್ಮ ಇಡೀ ಮಾಯಾವಿ ತಂಡದ ಕೊನೆ ಉಸಿರಿರುವವರೆಗೂ ನಿಮ್ಮ ನಿಮ್ಮ ಮುಗ್ಧ ಮಗುವಿನಂತ ನಗುವಿನ ಜೊತೆಗಿರುತ್ತೆ. ಸರ್.. ಬನ್ನಿ ನಾನು ನೀವು ಚಂದ್ರಣ್ಣ ಬೆಸ್ಟ್ ಓಟ್ಪುಟ್ಗಾಗಿ ಜಗಳ ಮಾಡೋಣ.. ಅಟ್ಲೀಸ್ಟ್ ಮೂವರೂ ಒಂದು ಹಗ್ ಮಾಡೋಣ… ʻಮಿಸ್ ಯೂʼ… ಅನ್ನೋಕೂ ಆಗ್ತಿಲ್ಲ…