ಶಾಂತಿ ಹಾಗೂ ಸೌಹಾರ್ದತೆಗೆ ಹೆಸರಾಗಿರುವ ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಕ್ರೈಂ ಸಿಟಿಯಾಗಿ ಬದಲಾಗುತ್ತಿದೆ. ಒಂದು ಕಾಲದಲ್ಲಿ ಪೆನ್ಷನರ್ಸ್ ಪ್ಯಾರಡೈಸ್ ಎನಿಸಿದ್ದ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಮೈಸೂರಿಗರನ್ನು ಬೆಚ್ಚಿಬೀಳಿಸಿದೆ.
ಹೊರ ರಾಜ್ಯಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಗ್ಯಾಂಗ್ ರೇಪ್ ಪ್ರಕರಣ ಇದೀಗ ಮೈಸೂರಿಗೂ ವಕ್ಕರಿಸಿದೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಘೋರ ಘಟನೆ ಮೈಸೂರಿನಲ್ಲಿ ನಡೆದಿದೆ.
ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯನೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿ ತೆರಳಿದ ವೇಳೆ ಐದಾರು ಮಂದಿ ಯುವಕರ ತಂಡ ಆಕೆಯ ಗ್ಯಾಂಗ್ ರೇಪ್ ನಡೆಸಿದೆ ಎನ್ನಲಾಗಿದೆ. 6 ಮಂದಿ ದುಷ್ಕರ್ಮಿಗಳು ಯುವಕನಿಗೆ ಹಲ್ಲೆ ಮಾಡಿ, ನಂತರ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ವರದಿಯಾಗಿದೆ.
ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರದ ಬಳಿಕ ವಿದ್ಯಾರ್ಥಿನಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಆಲನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.