ಕೇಂದ್ರದಲ್ಲಿ ತೃತೀಯ ರಂಗ ರಚನೆಗೆ ಭಾರೀ ಕಸರತ್ತು ನಡೆಸಿದ್ದ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶ ಪಕ್ಷ(ಟಿಡಿಪಿ)ವನ್ನು ವಿಧಾನಸಭೆ ಚುನಾವಣೆಯಲ್ಲಿ ಧೂಳೀಪಟ ಮಾಡಿ ಆಂಧ್ರಪ್ರದೇಶದಲ್ಲಿ ಸರ್ಕಾರ ರಚಿಸಲಿರುವ ವೈಎಸ್‍ಆರ್‍ಸಿ ಮುಖ್ಯಸ್ಥ ಮತ್ತು ನಿಯೋಜಿತ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದರು.
ಆಂಧ್ರದಲ್ಲಿ ವಿಜಯದುಂದುಭಿ ಮೊಳಗಿಸಿರುವ ವೈಎಸ್‍ಆರ್ ಕಾಂಗ್ರೆಸ್ ಪಕ್ಷವು ನರೇಂದ್ರ ಮೋದಿ ಸಾರಥ್ಯದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‍ಡಿಎ)ಕ್ಕೆ ಬೆಂಬಲ ನೀಡಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿಯೂ ಈ ಭೇಟಿ ಮಹತ್ವದ್ದಾಗಿತ್ತು.
ಪ್ರಚಂಡ ಬಹುಮತದೊಂದಿಗೆ ಎನ್‍ಡಿಎ ಸರ್ಕಾರವನ್ನು ಅಧಿಕಾರಕ್ಕೆ ತಂದು ಮತ್ತೊಮ್ಮೆ ಪ್ರಧಾನಿ ಮಂತ್ರಿಯಾಗುತ್ತಿರುವ ಮೋದಿಯವರನ್ನು ಜಗನ್ ಅಭಿನಂದಿಸಿದರು.ಪಕ್ಷದ ನೂತನ 9 ಸದಸ್ಯರು ಸಹ ಈ ಸಂದರ್ಭದಲ್ಲಿ ಹಾಜರಿದ್ದರು.
ಆಂಧ್ರಪ್ರದೇಶ ವಿಭಜನೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಬೇಕು, ರಾಜ್ಯಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು, ಅಗತ್ಯ ಹಣಕಾಸು ನೆರವು ಮತ್ತು ಇತರ ಯೋಜನೆಗಳನ್ನು ಮಂಜೂರು ಮಾಡುವಂತೆಯೇ ಅವರು ಮೋದಿಯವರಲ್ಲಿ ಮನವಿ ಮಾಡಲಿದ್ದಾರೆ.
ಚಂದ್ರಬಾಬು ನಾಯ್ಡು ಮುಖಂಡತ್ವದ ಟಿಡಿಪಿ ಮೋದಿ ಅವರ ವಿರೋಧಿ ಪಕ್ಷವಾಗಿತ್ತು. ಆದರೆ ಮೇ 30ರಿಂದ ಆಂಧ್ರಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರುವ ವೈಎಸ್‍ಆರ್‍ಸಿ ನಮೋ ಅವರ ಮಿತ್ರ ಪಕ್ಷವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
175 ಸದಸ್ಯ ಬಲದ ಆಂಧ್ರಪ್ರದೇಶದಲ್ಲಿ ವೈಎಸ್‍ಆರ್‍ಸಿ 151 ಸ್ಥಾನಗಳಲ್ಲಿ ಪ್ರಚಂಡ ಜಯಭೇರಿ ಬಾರಿಸಿತ್ತು. ಅಲ್ಲದೇ 25 ಲೋಕಸಭಾ ಸ್ಥಾನಗಳಲ್ಲಿ 22ರಲ್ಲಿ ಭರ್ಜರಿ ಜಯ ದಾಖಲಿಸಿದೆ.
ಮೇ 30ರಂದು ವಿಜಯವಾಡದ ಇಂದಿರಾಗಾಂಧಿ ಮುನಿಸಿಪಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಜಗನ್ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.