ಹೈಕಮಾಂಡ್ ಎಚ್ಚರಿಕೆಯ ಹೊರತಾಗಿಯೂ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ನಿಲ್ಲುವಂತೆ ಕಾಣುತ್ತಿಲ್ಲ. ಒಂದೆಡೆ ಸಿಎಂ ಯಡಿಯೂರಪ್ಪ ಅವರ ವಿರೋಧಿ ಬಣದ ನಾಯಕರು ಟೀಕಾ ಪ್ರಹಾರವನ್ನು ಮುಂದುವರೆಸಿದ್ದಾರೆ. ಸಿಎಂ ಆಪ್ತರು ವಿರೋಧಿ ಬಣದ ಸದಸ್ಯರ ಮೇಲೆ ಹರಿಹಾಯುತ್ತಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಚರ್ಚೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಇದೇ ವಿಷಯ ಕುರಿತು ವಿಧಾನಸೌಧದಲ್ಲಿ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸವಾಲು ಹಾಕಿದ್ದಾರೆ. ಶಾಸಕ ಯತ್ನಾಳ್ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಕುಮಾರಸ್ವಾಮಿ ಅವರು, “ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಮ್ಮ ನಾಯಕರು, ಅವರಿದ್ದರೆ ಮಾತ್ರ ಎಲ್ಲರೂ ಗೆದ್ದು ಬರುತ್ತಾರೆ. ಈಗ ಯಡಿಯೂರಪ್ಪ ಅವರ ಮೇಲೆಯೇ ಮಾತನಾಡುತ್ತಿರುವವರು ತಾಕತ್ತಿದ್ದರೆ ಒಮ್ಮೆ ರಾಜೀನಾಮೆ ಕೊಟ್ಟು ಗೆದ್ದು ಬರಲಿ ನೋಡೋಣ” ಎಂದು ಸವಾಲು ಹಾಕಿದರು.
ಜೊತೆಗೆ, “ಇಬ್ಬರು ಮೂವರು ಶಾಸಕರಿಗಾಗಿ ಯಾಕೆ ಶಾಸಕಾಂಗ ಸಭೆ ಕರೆಯಬೇಕು? ಈಗಾಗಲೇ ಅವರಿಗೆಲ್ಲ ಹೈಕಮಾಂಡ್ ಎಚ್ಚರಿಕೆ ಕೊಟ್ಟಿದೆ. ಆದರೂ ತಮ್ಮ ಮಾತು ನಿಲ್ಲಿಸಿಲ್ಲ. ನಾವು ದೆಹಲಿಗೆ ಹೋಗುತ್ತೇವೆ. ಆದರೆ ಅದು ಶೋಭಕ್ಕ ಅವರನ್ನು ಅಭಿನಂದಿಸಲು. ಅವರು ಮಂತ್ರಿಯಾಗಿದ್ದಾರೆ ಅವರನ್ನು ಅಭಿನಂದಿಸಲು ದೆಹಲಿಗೆ ಹೋಗುತ್ತಿದ್ದೇವೆ” ಎಂದು ಸಿಎಂ ಯಡಿಯೂರಪ್ಪ ಆಪ್ತರ ದೆಹಲಿ ಭೇಟಿಯ ಬಗ್ಗೆ ಮಾಹಿತಿ ನೀಡಿದ್ದಾರೆ.