ಕೊರೊನಾ ಲಾಕ್ ಡೌನ್ ನಿಂದ ಲಕ್ಷಾಂತರ ಮಂದಿ ಪರದಾಡುತ್ತಿದ್ದಾರೆ. ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಚಿತ್ರೀಕರಣ , ಸಿನಿಮಾ ಕೆಲಸವಿಲ್ಲದೆ ಸಾವಿರಾರು ಸಿನಿ ಕಾರ್ಮಿಕರ ಬದುಕು ಕಷ್ಟದಲ್ಲಿದೆ. ಸಂಕಷ್ಟದಲ್ಲಿರುವ ಅನೇಕ ಮಂದಿಗೆ ಈಗಾಗಲೇ ಸಾಕಷ್ಟು ಜನ ಸಹಾಯ ಮಾಡಿದ್ದಾರೆ. ನೆರವಿನ ಹಸ್ತ ಚಾಚುತ್ತಿದ್ದಾರೆ.
ಇದೀಗ ಸಿನಿ ಕಾರ್ಮಿಕರ ನೆರವಿಗೆ ರಾಕಿಂಗ್ ಸ್ಟಾರ್ ಯಶ್ ಧಾವಿಸಿದ್ದಾರೆ. ಸಂಕಷ್ಟದಲ್ಲಿರುವ 3 ಸಾವಿರ ಸಿನಿ ಕಾರ್ಮಿಕರಿಗೆ ಯಶ್ ನೆರವು ನೀಡುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಯಶ್ ‘ಸಂಕಷ್ಟದಲ್ಲಿರುವ 3 ಸಾವಿರಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಕುಟುಂಬಗಳಿಗೆ ನಾನು ಸಂಪಾದನೆ ಮಾಡಿರುವ ಸ್ವಂತ ಹಣದಿಂದ ತಲಾ 5 ಸಾವಿರ ರೂಪಾಯಿ ನೀಡುತ್ತಿರುವುದಾಗಿ’ ತಿಳಿಸಿದ್ದಾರೆ.
ಯಶ್ ಅವರ ಕಾರ್ಯಕ್ಕೆ ನಟ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯೆ ನೀಡಿ ಧನ್ಯವಾದ ತಿಳಿಸಿದ್ದಾರೆ. ನಿಮ್ಮಿಂದ ಇಂಥ ಕಾರ್ಯ ಮತ್ತಷ್ಟು ಆಗಲಿ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಿಯಲ್ ಸ್ಟಾರ್, ಉತ್ತಮ ಕಾರ್ಯ. ಧನ್ಯವಾದಗಳು ಯಶ್. ಇಂಥ ಮತ್ತಷ್ಟು ಮಹತ್ಕಾರ್ಯಗಳು ನಿಮ್ಮಿಂದ ನಡೆಸಲು ಆ ಭಗವಂತ ತಮಗೆ ಶಕ್ತಿ ನೀಡಲಿ’ ಎಂದು ಹೇಳಿದ್ದಾರೆ.
ಯಶ್ ಮಹತ್ವದ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಸಾಕಷ್ಟು ಧನ್ಯವಾದ ತಿಳಿಸುತ್ತಿದ್ದಾರೆ. ಅಂದಹಾಗೆ ಈಗಾಗಲೇ ಅನೇಕ ಕಲಾವಿದರು ಸಂಕಷ್ಟದ ಸಮಯದಲ್ಲಿ ನೆರವಿಗೆ ನಿಂತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಸುದೀಪ್ ಸೇರಿದಂತೆ ಅನೇಕರು ಕಷ್ಟದಲ್ಲಿರುವವರಿಗೆ ಆಹಾರ ಕಿಟ್, ಅಗತ್ಯ ವಸ್ತುಗಳನ್ನು ನೀಡುವ ಮೂಲಕ ನೆರವು ನೀಡಿದ್ದಾರೆ.